ತಿರುವನಂತಪುರ: ಕಾಸರಗೋಡಿನಿಂದ ತಿರುವನಂತಪುರ ತನಕದ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸುವ ಯೋಜನೆಗೆ ಅಗತ್ಯದ ಭೂಸ್ವಾಧೀನ ಕ್ರಮಗಳನ್ನು ಫೆಬ್ರವರಿ ತಿಂಗಳೊಳಗೆ ಪೂರ್ತಿಗೊಳಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲ್ಲಿಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯನ್ನು 45 ಮೀಟರ್ ಆಗಿ ಅಗಲಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಕ್ರಮಗಳ ಪೈಕಿ ಕಾಸರಗೋಡಿನಿಂದ ಕೊಚ್ಚಿ ತನಕ ಶೇಕಡಾ 80ರಷ್ಟು ಈಗಾಗಲೇ ಪೂರ್ಣಗೊಂಡಿದೆ. ಕೊಚ್ಚಿಯಿಂದ ತಿರುವನಂತಪುರ ವರೆಗಿನ ಶೇಕಡಾ 70ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಫೆಬ್ರವರಿ ತಿಂಗಳೊಳಗಾಗಿ ರಾಜ್ಯದ ಎಲ್ಲ ಕಡೆಗಳ ಭೂಸ್ವಾಧೀನ ಕ್ರಮಗಳು ಪೂರ್ಣಗೊಳ್ಳಲಿವೆ ಎಂದವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಅಗತ್ಯದ ಭೂಸ್ವಾಧೀನಪಡಿಸುವ ಪ್ರಕ್ರಿಯೆಗೆ ಹಲವೆಡೆಗಳಲ್ಲಿ ವಿರೋಧ ವ್ಯಕ್ತವಾಗತೊಡಗಿದೆ. ಕೇರಳದ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅತೀ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು 45 ಮೀಟರ್ ಆಗಿ ಅಗಲಗೊಳಿಸಲು ತೀರ್ಮಾನಿಸಲಾಗಿದೆ. ಅದರಲ್ಲಿ ಕನಿಷ್ಠ ಒಂದು ಸೆಂಟಿ ಮೀಟರ್‍ನಷ್ಟಾದರೂ ಕಡಿಮೆಗೊಳಿಸುವ ಪ್ರಶ್ನೆಯೇ ಇಲ್ಲವೆಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಹೆದ್ದಾರಿ ಯೋಜನೆಗಾಗಿ ತೆರವುಗೊಳಿಸಬೇಕಾಗಿ ಬರುವ ಕಟ್ಟಡಗಳಿಗೆ 1000 ಸ್ಕ್ಯಾರ್ ಫೀಟ್‍ಗೆ ತಲಾ 40 ಲಕ್ಷ ರೂ. ತನಕ ನಷ್ಟ ಪರಿಹಾರ ನೀಡಲಾಗುತ್ತಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಹೆಚ್ಚು ನಷ್ಟ ಪರಿಹಾರ ನೀಡಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯು ರಾಜ್ಯದ ಮುಂದಿನ ಭವಿಷ್ಯ ಮತ್ತು ಅಭಿವೃದ್ಧಿಗೆ ಅತೀ ಅಗತ್ಯವಾಗಿ ಬೇಕಾಗಿದೆ. ಇದನ್ನು ಜಾರಿಗೊಳಿಸುವಾಗ ಹಲವರಿಗೆ ನಷ್ಟ ಮತ್ತು ಸಂಕಷ್ಟಗಳು ಉಂಟಾಗಬಹುದು. ಅದನ್ನೆಲ್ಲ ಸಹಿಸಿ ಜನರು ಈ ಯೋಜನೆಗೆ ಸಹಕರಿಸಬೇಕೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿನಂತಿಸಿದರು.