ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ನಡೆದ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ಅಪರಾಹ್ನ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಿತು.
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಥಾಮಸ್ ಡಿಸೋಜಾ ಅವರು ಮಾತನಾಡಿ, ಗಡಿನಾಡಿನ ಕನ್ನಡ ಸವಾಲುಗಳು ಪ್ರತಿವರ್ಷ ಉಲ್ಬಣಿಸುತ್ತಿರುವುದು ಆತಂಕಕಾರಿಯಾಗಿದೆ. ವಿವಿಧ ಆಯಾಮಗಳಲ್ಲಿ ಇಲ್ಲಿಯ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಕಸಿಯುವಿಕೆಗೆ ಅಧಿಕಾರಿ ವರ್ಗ ಶ್ರಮಿಸುತ್ತಿರುವುದು ವ್ಯಾಪಕಗೊಳ್ಳುತ್ತಿದ್ದು, ಒಗ್ಗಟ್ಟಿನ ಕೊರತೆ ಹೈರಾಣಗೊಳಿಸುತ್ತಿದೆ ಎಂದು ತಿಳಿಸಿದರು. ಜನಸಾಮಾನ್ಯರ ಮನೋ ತಲ್ಲಣಕ್ಕೆ ಕಾರಣವಾಗಿರುವ ಕನ್ನಡ ಧಮನ ನೀತಿಗೆದುರಾಗಿ ಗಟ್ಟಿ ಧ್ವನಿ, ನೇತೃತ್ವದ ಕೊರತೆ ಕಾರಣವಾಗಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸೂಕ್ತ ರೀತಿಯಲ್ಲಿ ಕನ್ನಡ ಶಿಕ್ಷಕರನ್ನೇ ನೇಮಕಗೊಳಿಸುವ ನಿಟ್ಟಿನ ಕ್ರಿಯಾತ್ಮಕ ಚಳವಳಿಗಳು ನಡೆಯಬೇಕು ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಎಂ.ಉಮೇಶ ಸಾಲ್ಯಾನ್ ಅವರು ಕಾಸರಗೋಡಿನ ಕನ್ನಡಿಗರ ಜ್ವಲಂತ ಸಮಸ್ಯೆಗಳು, ಉಪನ್ಯಾಸಕಿ ಲಕ್ಷ್ಮೀ ಕೆ ಅವರು ಭಾಷಾ ಅಲ್ಪ ಸಂಖ್ಯಾತರಾದ ಕಾಸರಗೋಡು ಕನ್ನಡಿಗರ ಹಕ್ಕು ಬಾಧ್ಯತೆಗಳು, ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಎಂ.ಮಹಾಲಿಂಗೇಶ್ವರ ಭಟ್ ಅವರು ಕನ್ನಡ ಭಾಷೆ ಮತ್ತು ಸಂಸ್ಕøತಿಯ ಉಳಿವಿಗಾಗಿ ಇಲ್ಲಿಯ ಮಣ್ಣಿನ ಮಕ್ಕಳು ಮಾಡಲೇಬೇಕಾದ ಕರ್ತವ್ಯಗಳು ವಿಷಯಗಳ ಬಗ್ಗೆ ಪ್ರಬುದ್ದ ವಿಷಯ ಮಂಡನೆ ನಡೆಸಿದರು.
ಪ್ರದೀಪ್ ಕುಮಾರ್ ಶೆಟ್ಟಿ ಡಿ.ಬಿ.ಸ್ವಾಗತಿಸಿ, ಗೋವಿಂದ ಶರ್ಮಾ ಕೆ ವಂದಿಸಿದರು. ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು.
ವಿಚಾರ ಸಂಕಿರಣದ ಮೊದಲು ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಬೆಂಗಳೂರು ಅವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ನಡೆಯಿತು. ಬಳಿಕ ಕಾಸರಗೋಡು ಸರಕಾರಿ ಕಾಲೇಜಿನ ರಮ್ಯಶ್ರೀ ಮತ್ತು ತಂಡದವರಿಂದ ಭಾಗ ಸಂಗಮ ಗೀತೆಗಳ ಗಾಯನ ನಡೆಯಿತು. ಸಮಾರೋಪ ಸಮಾರಂಭದ ಬಳಿಕ ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯ್ಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ ತಂಡದಿಂದ ಮುರಾಸುರ ವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಸುಧೀರ್ ಕುಮಾರ್ ರೈ ಸ್ವಾಗತಿಸಿ, ನಿರ್ವಹಿಸಿದರು. ಚಂದ್ರಶೇಖರ ರೈ ವಂದಿಸಿದರು.