ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅಭಿಮತ
ಬದಿಯಡ್ಕ: ಅಚ್ಚಗನ್ನಡ ಪ್ರದೇಶವಾದ ಗಡಿನಾಡ ಕನ್ನಡಿಗರ ಹಿತರಕ್ಷಣೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ನ ಜವಾಬ್ದಾರಿ ಎಂದು ಮಾಜಿ ಸಚಿವೆ, ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯಕ್ ಅವರು ಹೇಳಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಪರಿಸರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಆಯೋಜಿಸಿದ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶನಿವಾರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸುದೀರ್ಘ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್‍ನ ನಿರಂತರ ಹೋರಾಟದ ಫಲವಾಗಿ ಒಂದರಿಂದ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಗಡಿನಾಡಿನ ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿ 5 ಶೇ. ಉದ್ಯೋಗ ಮೀಸಲಾತಿ ಪಡೆಯಲು ಸಾಧ್ಯವಾಯಿತು. ಸಾಹಿತ್ಯ ಪರಿಷತ್ ಸಾಹಿತ್ಯಕ್ಕೆ ಮಾತ್ರ ಮನ್ನಣೆ ನೀಡಿಲ್ಲ. ಕೃಷಿ ಮೇಳ, ರೈತ ಮೇಳ, ಸಾಧಕರೊಡನೆ ಸಂವಾದ, ಮಹಿಳೆಯರನ್ನು ಸಬರನ್ನಾಗಿಸುವ ಮೊದಲಾದ ಸಕ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ ಎಂದ ಅವರು ಗಡಿನಾಡಿನ ಘಟಕ ಅರ್ಜಿ ಸಲ್ಲಿಸಿದರೆ ಕೇಂದ್ರ ಸಮಿತಿಯು ಕಾಸರಗೋಡು ಸಾಹಿತ್ಯ ಪರಿಷತ್‍ಗೆ 1000 ಕನ್ನಡ ಪುಸ್ತಕ ನೀಡಲಿದೆ ಎಂದರು.
ಶಿಕ್ಷಣದಲ್ಲಿ ಮಾನವೀಯತೆ ಇರಬೇಕು. ಸರ್ವಶಾಂತಿಯ ಭಾವನೆ, ಪ್ರತಿಭಾ ಸಮಾನತೆ ಇರಬೇಕು ಎಂದು ಹೇಳಿದ ಅವರು ಜಾನಪದವು ನಾಗರಿಕತೆಯ ಬೇರು. ಅದರ ಜತೆಗೆ ಕನ್ನಡ ಸಂಸ್ಕøತಿಯನ್ನು ಬೆಳೆಸಬೇಕು. ಮೂಡನಂಬಿಕೆಯನ್ನು ಬಿಟ್ಟು ಚಿಂತನಶೀಲರಾಗಬೇಕಾದ ಅಗತ್ಯ ಇಂದಿದೆ. ಮಾನವರಿಗೆ ಚಿಂತನೆ ಮತ್ತು ಪ್ರೀತಿ ಮುಖ್ಯ. ಕೇವಲ ಅಕ್ಷರ ಕಲಿಸುವುದು ಮಾತ್ರ ಶಿಕ್ಷಣವಲ್ಲ. ಇಂದು ಬದುಕುವ ಕಲಿಸುವ ಶಿಕ್ಷಣ ಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ನಾ.ಮೊಗಸಾಲೆ, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್.ಕೆ.ಆರ್ ಮೊದಲಾದವರು ಶುಭಹಾರೈಸಿದರು. ಸಂಘಟನಾ ಕಾರ್ಯಾಧ್ಯಕ್ಷ ಜಯದೇವ ಖಂಡಿಗೆ, ಸಂಘಟನಾ ಸಮಿತಿ ಉಪಾಧ್ಯಕ್ಷ ವೆಂಕಟರಾಜ ಸಿ.ಎಚ್, ಸಂಘಟನಾ ಸಮಿತಿ ಉಪಾಧ್ಯಕ್ಷ ಶಿವಪ್ರಕಾಶ್ ಎಂ.ಕೆ, ಕಾಸರಗೋಡು ಸರಕಾರಿ ಕಾಲೇಜು ಸ್ನೇಹರಂಗ ಅಧ್ಯಕ್ಷೆ ವಿಶಾಲಾಕ್ಷಿ ಬಿ.ಕೆ. ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ಅವರ ಅವಲೋಕನ-ಸಾಹಿತ್ಯ ಶಾಸ್ತ್ರ ಸಮೀಕ್ಷೆ, ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಸಂಗ್ರಹಿಸಿರುವ ಹವಿಗನ್ನಡದ ಸವಿ ನಾಟಕಗಳು, ಪೆÇ್ರ.ವಿ.ಬಿ.ಅರ್ತಿಕಜೆ ಹಾಗೂ ಡಾ.ಹರಿಕೃಷ್ಣ ಭರಣ್ಯ ಸಂಪಾದಿಸಿರುವ ಹವ್ಯಕ ಹಾಡುಗಳ ಸಂಗ್ರಹ ತುಪ್ಪಶನ ಉಂಬಲೆ ಮತ್ತು ನಿವೃತ್ತ ಶಿಕ್ಷಕ ಎಂ.ತಿಮ್ಮಣ್ಣ ಭಟ್ ಧರ್ಮತ್ತಡ್ಕ ಬರೆದಿರುವ ಶ್ರೀಕೃಷ್ಣ ಪರಂಧಾಮ ಯಕ್ಷಗಾನ ಪ್ರಸಂಗ ಕೃತಿ ಹಾಗೂ ಕಾಟುಕುಕ್ಕೆ ಶಾಲಾ ವಿದ್ಯಾರ್ಥಿನಿ ಪ್ರಿಯ ಎಸ್. ಬರೆದಿರುವ ಪ್ರತಿಬಿಂಬ ಕವನ ಸಂಕಲನ, ಜೋನ್ ಡಿ'ಸೋಜಾ ಸಂಪಾದಕತ್ವದ `ಪೆÇಸಡಿಗುಂಪೆ' ಮಾಸ ಪತ್ರಿಕೆಯ ವಿಶೇಷ ಪುರವಣಿಯನ್ನು ಬಿಡುಗಡೆಗೊಳಿಸಿದರು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ರಾಷ್ಟ್ರ ಧ್ವಜಾರೋಹಣ, ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ, ಎಸ್.ನಾರಾಯಣ ಭಟ್ ಕನ್ನಡ ಧ್ವಜಾರೋಹಣಗೈದರು. ಆ ಬಳಿಕ ನೀರ್ಚಾಲು ವಿಷ್ಣುಮೂರ್ತಿ ನಗರದಿಂದ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪಿ.ಶ್ರೀಕೃಷ್ಣ ಭಟ್ ಅವರನ್ನು ವೈಭವೋಪೇತ ಮೆರವಣಿಗೆಯೊಂದಿಗೆ ಸಮ್ಮೇಳನ ನಗರಿಗೆ ಸ್ವಾಗತಿಸಲಾಯಿತು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಮೆರವಣಿಗೆ ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರಿಷತ್‍ನ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ.ಧರ್ಮತ್ತಡ್ಕ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜನಾ ಸಮಿತಿ ಸದಸ್ಯ ಶೇಖರ ಶೆಟ್ಟಿ ಕೆ.ಕುಳ್ಯಾರ್ ಕಾರ್ಯಕ್ರಮ ನಿರ್ವಹಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕ ಗೌರವ ಕಾರ್ಯದರ್ಶಿ ನವೀನ್‍ಚಂದ್ರ ಎಂ.ಎಸ್. ವಂದಿಸಿದರು.
* ನ್ಯಾಯಯುತ ಹೋರಾಟಕ್ಕೆ ನಾನೂ ಇದ್ದೇನೆ : ಎನ್.ಎ.ನೆಲ್ಲಿಕುನ್ನು
ಕಾಸರಗೋಡಿನ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಅಧ್ಯಾಪಕರನ್ನು ನೇಮಿಸುವ ಮೂಲಕ ಕನ್ನಡಿಗರ ಸಂವಿಧಾನ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಅಧ್ಯಾಪಕರ ನೇಮಕವನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಈ ಬಗ್ಗೆ ಕನ್ನಡ ವಿದ್ಯಾರ್ಥಿಗಳು ಮತ್ತು ಹೆತ್ತವರು ನಡೆಸಿದ ಹೋರಾಟದ ಫಲವಾಗಿ ತಾತ್ಕಾಲಿಕ ಪರಿಹಾರವಾಗಿದ್ದರೂ, ಶಾಶ್ವತ ಪರಿಹಾರಕ್ಕೆ ನಿರಂತರವಾದ ಹೋರಾಟ ಅನಿವಾರ್ಯವಾಗಿದೆ. ಮುಂದಿನ ವಿಧಾನಸಭಾ ಅ„ವೇಶನದಲ್ಲಿ ಕಾಸರಗೋಡಿನ ಕನ್ನಡಿಗ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.
ಪುಸ್ತಕ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ಅವರು ಕನ್ನಡಿಗರ ನ್ಯಾಯಯುತ ಹಾಗು ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ನಡೆಸುತ್ತಿರುವ ಎಲ್ಲಾ ಹೋರಾಟಗಳಿಗೂ ನನ್ನ ಸಂಪೂರ್ಣ ಬೆಂಬಲಿವಿದೆ ಎಂದೂ, ಹೋರಾಟದಲ್ಲಿ ನಾನೂ ಮುಂಚೂಣಿಯಲ್ಲಿರುವುದಾಗಿ ಅವರು ಭರವಸೆ ನೀಡಿದರು.