ಮಂಜೇಶ್ವರ: ಇತಿಹಾಸ ಪ್ರಸಿದ್ಧ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪರಿಸರದಲ್ಲಿ ದೇವಸ್ಥಾನದ ಸೇವಾ ಕಾರ್ಯಕರ್ತರನ್ನು ಬರ್ಬರವಾಗಿ ಮಾರಕ ಆಯುಧಗಳಿಂದ ಮಾರಣಾಂತಿಕವಾದ ಹಲ್ಲೆಯನ್ನು ಮಾಡಿದ್ದು, ಕ್ಷೇತ್ರದ ಮತ್ತು ಆಸ್ತಿಕರ ಬಂಧುಗಳಿಗೆ ಆಘಾತವನ್ನುಂಟು ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಗೋದೊಳಿ ಮೂಹೂರ್ತದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಾಗೂ ಗಾಯಗೊಂಡ ಕ್ಷೇತ್ರದ ಕಾರ್ಯಕರ್ತರು ಶೀಘ್ರದಲ್ಲಿ ಗುಣಮುಖರಾಗಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ನಡೆದ ಖಂಡನಾ ಸಭೆಯಲ್ಲಿ ಶ್ರೀಕ್ಷೇತ್ರದ ಆಡಳಿತ ಮೋಕ್ತೇಸರ ಸೂರ್ಯನಾರಾಯಣ ಕಡಂಬಾರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಪವಿತ್ರಪಾಣಿ ಸುಬ್ರಹ್ಮಣ್ಯ ಅನಲತ್ತಾಯ, ಸೇವಾ ಸಮಿತಿ ಅಧ್ಯಕ್ಷ ಚಂದಪ್ಪ ಶೆಟ್ಟಿ ಕಜೆಕೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯ ಶೆಟ್ಟಿ ಧರ್ಮೆಮಾರ್, ಮಾಜಿ ಆಡಳಿತ ಮೊಕ್ತೇಸರ ಪ್ರಭಾಕರ ಬಳ್ಳಕ್ಕುರಾಯ ಹಾಗೂ ಸೇವಾ ಸ್ಥೂರ್ತಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾದಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದರು. ಶ್ರೀ ಕ್ಷೇತ್ರವು ಭಾವೈಕ್ಯತೆಯ ಕ್ಷೇತ್ರವಾಗಿದ್ದು, ಅತ್ಯಂತ ಕಾರಣಿಕವೂ ಕೂಡಾ ಆಗಿದೆ. ಕ್ಷೇತ್ರದ ಹೆಸರನ್ನು ಹಾಳುಗೆಡಹಲು ದುಷ್ಕರ್ಮಿಗಳು ವಿನಾಃಕಾರಣ ಹಲ್ಲೆಗೈಯ್ಯುವ ಮೂಲಕ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ಇಂತಹ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಂಕೆಂದು ಆಗ್ರಹಿಸಿ ಸಂಬಂಧಪಟ್ಟವರಿಗೆ ಕ್ಷೇತ್ರದ ವತಿಯಿಂದ ದೂರು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಸಂಕಬೈಲು ಸತೀಶ್ ಅಡಪ ಸ್ವಾಗತಿಸಿ, ವಂದಿಸಿದರು.