ನವದೆಹಲಿ: ಸಿಬಿಐಯ ಮಧ್ಯಂತರ ನಿರ್ದೇಶಕರಾಗಿ ಎಂ ನಾಗೇಶ್ವರ ರಾವ್ ಅವರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಿಂದೆ ಸರಿದಿದ್ದಾರೆ.
ಬದಲಿಗೆ ಹೊಸ ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿ ಸಭೆಯ ಭಾಗವಾಗಿರುತ್ತೇನೆ ಎಂದು ಹೇಳಿದ್ದಾರೆ. ಉನ್ನತ ಮಟ್ಟದ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಇರುತ್ತಾರೆ.
ಸಭೆಯಲ್ಲಿ ಸಿಬಿಐಯ ನೂತನ ನಿರ್ದೇಶಕರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿಗಳಾದ ಜೆ ಕೆ ಶರ್ಮ ಮತ್ತು ಪಮಿರ್ಂದರ್ ರೈ ಅವರ ಹೆಸರು ಕೇಳಿಬರುತ್ತಿದೆ. ಇವರಲ್ಲಿ ರೈ ಹರ್ಯಾಣ ವಿಭಾಗದ ಅಧಿಕಾರಿ ಆಗಿದ್ದು ಇದೇ ತಿಂಗಳ 31ರಂದು ನಿವೃತ್ತರಾಗಲಿದ್ದಾರೆ. ರಾಜ್ಯ ಜಾಗೃತ ವಿಭಾಗದ ಮಹಾ ನಿರ್ದೇಶಕರಾಗಿ ಇವರು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ(ಆಂತರಿಕ ಭದ್ರತೆ) ರೀನಾ ಮಿತ್ರಾ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಅವರು ಸಿಬಿಐಯಲ್ಲಿ ಈಗಾಗಲೇ 5 ವರ್ಷ ಕೆಲಸ ಮಾಡಿದ್ದು ಮಧ್ಯ ಪ್ರದೇಶ ರಾಜ್ಯ ಜಾಗೃತ ಇಲಾಖೆಯಲ್ಲಿ ಹಲವು ಭ್ರಷ್ಟಾಚಾರ ಕೇಸುಗಳನ್ನು ನಿರ್ವಹಿಸಿದ್ದಾರೆ.
ಮಿತ್ರಾ ಅವರ ನೇಮಕವಾದರೆ ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆಯಾಗುತ್ತಾರೆ. ಉತ್ತರ ಪ್ರದೇಶದ ಮತ್ತೊಬ್ಬ ವಿಧಿವಿ????ನ ಪ್ರಯೋಗಾಲಯದ ಜವೀದ್ ಅಹ್ಮದ್ ಸಿಬಿಐಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವರ ಹೆಸರು ಕೂಡ ಕೇಳಿಬರುತ್ತಿದೆ.
ನಾಗೇಶ್ವರ ರಾವ್ ಅವರನ್ನು ಮಧ್ಯಂತರ ನಿರ್ದೇಶಕರಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಸರ್ಕಾರೇತರ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ವಿಚಾರಣೆ ನಡೆಸುತ್ತಿದ್ದರು.