ಬೀಜಿಂಗ್: ತೀವ್ರವಾದಿ ಇಸ್ಲಾಮ್ ನ್ನು ನಿಗ್ರಹಿಸಲು ಈಗಗಾಲೇ ಸಾಕಷ್ಟು ಕ್ರಮ ಕೈಗೊಂಡಿರುವ ಚೀನಾ ಈಗ ಇಸ್ಲಾಮ್ ನ ಸ್ವರೂಪವನ್ನೇ ಬದಲಾಯಿಸುವಂತಹ ಮಸೂದೆಯನ್ನು ಜಾರಿಗೆ ತಂದಿದೆ.
ಇಸ್ಲಾಮ್ ಧರ್ಮದ ಸ್ವರೂಪವನ್ನು ಚೀನಾಕ್ಕೆ ಹೊಂದುವಂತೆ ಇನ್ನು 5 ವರ್ಷಗಳಲ್ಲಿ ಬದಲಾವಣೆ ಮಾಡುವುದು ಈ ಕಾನೂನಿನ ಉದ್ದೇಶವಾಗಿದ್ದು, ಇದೇ ಗತಿ ಮುಂದಿನ ದಿನಗಳಲ್ಲಿ ಅಲ್ಲಿ ಅಸ್ಥಿತ್ವದಲ್ಲಿರುವ ಟಾವೊ ತತ್ತ್ವ, ಬೌದ್ಧಧರ್ಮ, ಕ್ಯಾಥೊಲಿಕ್, ಮತ್ತು ಪ್ರೊಟೆಸ್ಟೆಂಟ್ ಮತಗಳಿಗೂ ಅನ್ವಯವಾಗಬಹುದು ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಪ್ರಕಟಿಸಿವೆ.
ಧಾರ್ಮಿಕ ಅಂಶಗಳನ್ನು ಕಠಿಣವಾಗಿ ನಿಯಂತ್ರಿಸುತ್ತಿರುವ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಪ್ರಮುಖವಾಗಿ ಉಯ್ಘರ್ ಮುಸ್ಲಿಮರನ್ನು ಹತ್ತಿಕ್ಕಲು ಕ್ರಮಗಳನ್ನು ಕೈಗೊಂಡಿದ್ದರು. ಕ್ಸಿನ್ ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯ್ಘರ್ ಮುಸ್ಲಿಮರು ಪ್ರತ್ಯೇಕತಾವಾದ ಬಿತ್ತುತ್ತಿದ್ದಾರೆ ಎಂಬ ಕಾರಣಕ್ಕಾಗಿ ಇಸ್ಲಾಮಿಕ್ ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಲು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ವಶಪಡಿಸಿಕೊಂಡು, ರಂಜಾನ್ ಆಚರಣೆ, ನಮಾಜ್ ಮೇಲೆ ನಿರ್ಬಂಧ ವಿಧಿಸಿತ್ತು.
ಧರ್ಮವನ್ನು ಮಾನಸಿಕ ರೋಗ ಎಂದೇ ಪರಿಗಣಿಸಿ, ಅದನ್ನು ಗುಣಪಡಿಸಬೇಕೆಂಬುದು ಲಗಾಯ್ತಿನಿಂದಲೂ ಪ್ರತಿಪಾದಿಸಿಕೊಂಡು ಬಂದಿದೆ ಚೀನಾ, ಮೊದಲ ಭಾಗವಾಗಿ ಇಸ್ಲಾಮ್ ನ ಸ್ವರೂಪವನ್ನೇ ಬದಲಾವಣೆ ಮಾಡುವಂತಹ ಮಸೂದೆಯನ್ನು ಜಾರಿಗೆ ತಂದಿದೆ.