ನವದೆಹಲಿ: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಅಂಗವಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿದರು.
ಸಂಗ್ರಹಾಲಯದ ಮಹತ್ವವನ್ನು ಸಾರಿದ ಪ್ರಧಾನಿ, ನಮ್ಮ ದೇಶದ ಸಂಪದ್ಭರಿತ ಐತಿಹಾಸಿಕ ಕ್ಷಣಗಳು ಮತ್ತು ನಮ್ಮ ಯುವಜನತೆಯ ನಡುವಿನ ಸಂಬಂಧವನ್ನು ಹೇಳಲಿದ್ದು ಪ್ರಜೆಗಳ ಮಧ್ಯೆ ದೇಶಭಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕುರಿತ ದೆಹಲಿಯ ಕೆಂಪು ಕೋಟೆಯಲ್ಲಿನ ಸಂಗ್ರಹಾಲಯಕ್ಕೆ ಕೂಡ ಪ್ರಧಾನಿ ಭೇಟಿ ನೀಡಿದರು.
ಇದಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸ್ವಾತಂತ್ರ್ಯ ಹೋರಾಟಗಾರ ನೇತಾಜಿಗೆ ಗೌರವ ನಮನ ಸಲ್ಲಿಸಿದ್ದರು.