ಕುಂಬಳೆ: ಮುಜುಂಗಾವು ಶ್ರೀಭಾರತೀವಿದ್ಯಾಪೀಠದ ವರ್ಧಂತ್ಯುತ್ಸವವು ಇತ್ತೀಚೆಗೆ ನಡೆಯಿತು.
ದೀಪಪ್ರಜ್ವಲನೆ,ಶಂಖನಾದ,ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಮಕ್ಕಳ ವಿವಿಧ ಚಟುವಟಿಕೆಯೊಂದಿಗೆ ಸಾಂಗವಾಗಿ ನೆರವೇರಿತು. ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಧ್ವಜಾರೋಹಣಗೈದು ಮಾತನಾಡಿದರು.ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಹಿತವಚನ ನುಡಿದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಡನಾಡು ಗ್ರಾಮದ ಗ್ರಾಮಾಧಿಕಾರಿ ಸತ್ಯನಾರಾಯಣ ತಂತ್ರಿ ಅವರು ಮಾತನಾಡಿ, ಒಬ್ಬ ವಿದ್ಯಾರ್ಥಿಯ ಹುಟ್ಟುಹಬ್ಬವೆಂದರೆ ಅವನಿಗೆ ಮಾತ್ರ ಹೆಚ್ಚಿನ ಸಂತೋಷ, ಸಡಗರ. ಆದರೆ ಶಾಲೆಯ ವರ್ಧಂತಿಯೆಂದರೆ ಶಾಲೆಯ ಹುಟ್ಟುಹಬ್ಬ. ಆ ಶಾಲೆಗೆ ಸಂಬಂಧಪಟ್ಟ ಎಲ್ಲರಿಗೂ ಸಂತಸದ ಜಾತ್ರೆ, ಉತ್ಸವ. ಎಲ್ಲರ ತನು-ಮನಗಳ ಚೇತರಿಕೆ, ವರ್ಧಮಾನ. ಇಲ್ಲಿ ಪಠ್ಯ ಆಂಗ್ಲಮಾಧ್ಯಮವಾದರೂ ಅದರೊಂದಿಗೆ ಸಂಸ್ಕøತವನ್ನೂ ಸಂಸ್ಕøತಿಯನ್ನೂ ಕಲಿಸುವ ವಿದ್ಯಾಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಂಸ್ಕøತ ಹಾಗೂ ಸಂಸ್ಕøತಿಗಳೆರಡನ್ನೂ ಒಂದೆಡೆ ಕಲಿಯುವ ಮಕ್ಕಳು ಧನ್ಯರು ಎಂದು ತಿಳಿಸಿದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಗೋವಿಂದ ಭಟ್ ಮುಳ್ಳಂಕೊಚ್ಚಿಯವರು ಮಾತನಾಡಿ, ಸಂಸ್ಕøತ ಹಾಗೂ ಸಂಸ್ಕøತಿಯನ್ನು ಉಳಿಸಿ,ಬೆಳೆಸುವ ಕಲಿಕೆ ಮಕ್ಕಳಿಂದಲೇ ಆರಂಭವಾಗಬೇಕು ಎಂದರು. ಮತ್ತೊಬ್ಬ ಅಭ್ಯಾಗತರಾದ ಪಿ.ಜಿ.ಕೃಷ್ಣಭಟ್ ಪುದುಕೋಳಿ ಅವರು ಮಾತನಾಡಿ, ಯಾವುದೇ ವಿಷಯವನ್ನು ಪ್ರೀತಿಸಿ ಕಲಿಯಲು ಬಾಲ್ಯದಿಂದಲೇ ಅಭ್ಯಾಸಮಾಡಿದಲ್ಲಿ ಅದು ಕರಗತವಾಗುವುದರಲ್ಲಿ ಸಂಶಯವಿಲ್ಲವೆಂದು ಮಕ್ಕಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.
ಸಾಂಸ್ಕøತಿಕ ಕಾರ್ಯಕ್ರಮಗಳು:
ವರ್ಧಂತಿ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ತಾಂಡವ ಗಣಪತಿ ನೃತ್ಯ, ಭರತನಾಟ್ಯ, ಸ್ವಾಗತಹಾಡು, ಗಣರಾಜ್ಯೋತ್ಸವದ ಪ್ರಯುಕ್ತ ಭಾಷಣ, ಪುಟ್ಟಮಕ್ಕಳಿಂದ ಆಂಗ್ಲಬಾಷೆಯಲ್ಲಿ ಸ್ವಾಗತ ಪರಿಚಯ, ಯೋಗಾಭ್ಯಾಸ, ವಿವೇಕಾನಂದರ ಬಾಲ್ಯಕತೆ, ತುಳುನೃತ್ಯ, ಭರತನಾಟ್ಯ,ಹತ್ತನೇತರಗತಿ ಕೃತಿಕಾಳಿಂದ ಕಥಾ ಸಂಕೀರ್ತನೆ, ಸಹಿತ ವೈವಿಧ್ಯತೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದುವು. ಎಲ್.ಕೆ.ಜಿ. ಮಕ್ಕಳಿಂದ ಎಸ್.ಎಸ್.ಎಲ್.ಸಿ ವರೆಗಿನ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರ ಬಹುಮುಖ ಪ್ರತಿಭೆಯು ಅನಾವರಣಗೊಂಡು ಮಕ್ಕಳ ಹೆತ್ತವರಿಗೂ ಶಿಕ್ಷಕವರ್ಗಕ್ಕೂ ಸಾರ್ಥಕ್ಯ ಭಾವ ಮೂಡಿತು.
ಅಧ್ಯಕ್ಷರು ಮಕ್ಕಳಿಂದ ರಚಿತವಾದ ವಾರ್ಷಿಕ ಮುಖವಾಣಿ ಪುಸ್ತಕ ಬೆಳಕು ಬಿಡುಗಡೆಗೊಳಿಸಿದರು.ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಪೆರಡಾನ ವಾರ್ಷಿಕ ವರದಿ ವಾಚಿಸಿದರು. ಆಟೋಟಸ್ಪರ್ಧೆ ಹಾಗೂ ಕಲಿಕೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ, ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್, ಕೋಂಗೋಟು ಗಣಪತಿ ಭಟ್ ಮೊದಲಾದವರು ಪ್ರತಿವರ್ಷ ಕೊಡಮಾಡುವ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲು ಸಹಕರಿಸಿದರು. ಹೈಸ್ಕೂಲು ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿ, ಕು.ಕೃತಿಕಾ ಕಾರ್ಯಕ್ರಮ ನಿರೂಪಿಸಿದಳು. ಆಡಳಿತಾಧಿಕಾರಿ ಶ್ಯಾಂಭಟ್ ದರ್ಭೆಮಾರ್ಗ ವಂದಿಸಿದರು.