ಉಪ್ಪಳ: ಜೋಡುಕಲ್ಲು ಸಮೀಪದ ಕಜೆ ಜನಾರ್ಧನ ಕ್ಷೇತ್ರದಲ್ಲಿ ಎರಡು ದಿನಗಳ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು. ಧನುರ್ಮಾಸದ ದಿನವಾದ ಗುರುವಾರ ಬೆಳಿಗ್ಗೆ ನಾಗ ದೇವರಿಗೆ ತಂಬಿಲ ಸೇವೆ, ಗಣಪತಿ ಹೋಮದೊಂದಿಗೆ ಆರಂಭಗೊಂಡ ಮಂಡಲಪೂಜಾ ಉತ್ಸವವು ಕಲಶಾಭಿಷೇಕ ಮೊದಲಾದ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಸಂಜೆ ರಂಗ ಪೂಜೆ, ರಾತ್ರಿ ದೇವರ ಬಲಿ, ಪಾಂಡ್ಯಡ್ಕದಿಂದ ಮುಂಡಾಲ್ತಾಯಿ ದೈವದ ಭಂಡಾರ ಆಗಮನ ಮತ್ತು ದೇವರ ಭೇಟಿ, ವಸಂತಕಟ್ಟೆ ಪೂಜೆ ನೆರವೇರಿತು. ಶುಕ್ರವಾರ ಬೆಳಗ್ಗೆ ದೇವರ ಬಲಿ, ಬಟ್ಟಲು ಕಾಣಿಕೆ ಸಮರ್ಪಣೆ, ರಾಜಾಂಗಣ ಪ್ರಸಾದ ಮದ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ತೀರ್ಥ ಪ್ರಸಾದ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ನೆರವೇರಿ, ರಾತ್ರಿ ಮುಂಡಲ್ತಾಯಿ ದೈವದ ನೇಮ ಜರುಗಿತು. ಗುರುವಾರ ಸಾಯಂಕಾಲ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಯೋಗೀಶ್ ರಾವ್ ಚಿಗುರುಪಾದೆ ರಚಿತ, ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶನದ ಉಳ್ಳಾಲ ರಾಣಿ ಅಬ್ಬಕ್ಕ ನೃತ್ಯ ರೂಪಕ ಪ್ರದರ್ಶನ ಕಂಡಿತು. ಎರಡು ದಿನಗಳ ಪರ್ಯಂತ ನಡೆದ ಮಂಡಲಪೂಜಾ ಕಾರ್ಯಕ್ರಮದಲ್ಲಿ ಕ್ಷೇತ್ರ ತಂತ್ರಿ ಶಂಕರನಾರಾಯಣ ಕಡಮಣ್ಣಾಯ, ಆಡಳಿತ ಮೊಕ್ತೇಸರ ಪಿಲಿಯಂದೂರು ಪ್ರಭಾಕರ ಆಳ್ವ, ಪವಿತ್ರಪಾಣಿ ಸತ್ಯನಾರಾಯಣ ಮೂಡಿತ್ತಾಯ, ಅರ್ಚಕ ಅಶ್ವಿನ್ ಭಟ್, ಸುರೇಶ್ ಹೊಳ್ಳ, ಸಚ್ಚಿದಾನಂದ ರೈ ಸೇರಿದಂತೆ ಮೊಕ್ತೇಸರರು, ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ, ಗೌರವಾಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಭಕ್ತರು ವಾರ್ಷಿಕ ಉತ್ಸವದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.