ಮಂಜೇಶ್ವರ: ಮಜಿಬೈಲು ಕೊಡ್ಡೆ ಶ್ರೀ ವನದುರ್ಗ ಮತ್ತು ನಾಗಬ್ರಹ್ಮ ಬನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಬೂಡುಮನೆ ನಾರಾಯಣ ಪದಕಣ್ಣಾಯ ತಂತ್ರಿಯವರ ನೇತೃತ್ವದಲ್ಲಿ ವೈದಿಕಶ್ರೀ ಪ್ರಸಾದ್ ನಲ್ಲೂರಾಯ ಅವರಿಂದ ವಿವಿಧ ವೈದಿಕ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಂಗವಾಗಿ ಮಜಿಬೈಲ್‍ನ ಶ್ರೀ ಅಯ್ಯಪ್ಪ ಮಂದಿರದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಯನ್ನು ಕೊಂಡೆವೂರು ಶ್ರೀಗಳು ಉದ್ಘಾಟಿಸಿದರು. ಬಳಿಕ ವೈದಿಕ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಪೂಜೆ, ಬಿಂಬ ಶುದ್ಧಿ, ಬಿಂಬಾಧಿವಾಸ ಜರಗಿತು.
ಗಣಪತಿ ಹೋಮ, ಕಲಶಾಧಿವಾಸ, ಕಲಶ ಪೂಜೆ ಮತ್ತು ಕುಂಭ ಲಗ್ನ ಸುಮೂಹರ್ತದಲ್ಲಿ ಶ್ರೀ ದೇವರುಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ, ಆಶ್ಲೇಷ ಬಲಿ, ತಂಬಿಲಾದಿಗಳು ನಡೆಯಿತು. ದೇವರುಗಳಿಗೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ವಿವಿಧ ಭಜನಾ ಸಂಘಗಳಿಂದ ದೇವರ ನಾಮಸಂಕೀರ್ತನೆ, ಅನ್ನಸಂತರ್ಪಣೆ ಜರಗಿತು.