ಪೆರ್ಲ: ಸಾನ್ನಿಧ್ಯದ ವೃದ್ದಿಯಾಗಬೇಕಿದ್ದರೆ ಭಕ್ತಿಯ ಶಕ್ತಿ ಪ್ರಭಾವಶಾಲಿಯಾಗಿರುತ್ತದೆ. ಭಕ್ತರ ದೃಢಭಕ್ತಿಗಳಿಂದ ಅನುಗ್ರಹದ ಶಕ್ತಿ ವೃದ್ದಿಸುತ್ತದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀಮಾತಾನಂದಮಯೀ ಅವರು ಅಭಿಪ್ರಾಯ ವ್ಯಕ್ತಪಡಿಸದರು.
ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ಮಾತೆಯರಿಗೆ ಸಮಾಜ ನೀಡಿರುವ ಸ್ಥಾನಮಾನ ಮಹತ್ತರವಾದುದಾಗಿದೆ. ಸ್ತ್ರೀಶಕ್ತಿ ಕ್ರಿಯಾತ್ಮಕವಾಗಿರುವಲ್ಲಿ ಸಂತುಷ್ಠ ಸಮಾಜ ಮುನ್ನಡೆಯುತ್ತದೆ ಎಂದು ತಿಳಿಸಿದ ಅವರು ಸಂಪ್ರದಾಯ, ಪರಂಪರೆಯನ್ನು ಮರೆತು ಆಧುನಿಕ ಫ್ಯಾಶನ್ ಯುಗದೊಂದಿಗಿನ ನಾಗಾಲೋಟ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಭೀತಿ ವ್ಯಕ್ತಪಡಿಸಿದರು. ನವತಾರುಣ್ಯ ಹಾದಿ ತಪ್ಪದೆ ಸದಾಶಯದೆಡೆಗೆ ಮುನ್ನಡೆಯಲು ಎಳವೆಯಲ್ಲೇ ಆದರ್ಶದ ಅರಿವು ಮೂಡಿಸಬೇಕು.ಈ ನಿಟ್ಟಿನಲ್ಲಿ ಆರಾಧನಾಲಯಗಳ ಧನಾತ್ಮಕತೆಯೆಡೆಗೆ ಮಕ್ಕಳನ್ನು ಕರೆತರಬೇಕು ಎಂದು ಅವರು ಕರೆನೀಡಿದರು.
ಇಡಿಯಡ್ಕ ಶ್ರೀಕ್ಷೇತ್ರದ ಆಧ್ಯಾತ್ಮಿಕ ಶಕ್ತಿಯ ಸಾಮರ್ಥೈ ಅತ್ಯಪೂರ್ವವಾಗಿದ್ದು, ಇಲ್ಲಿ ಕಾಲಾಕಾಲಕ್ಕೆ ನಡೆಸಿಕೊಂಡುಬರುತ್ತಿರುವ ರೀತಿ ರಿವಾಜುಗಳಿಂದ ಸಾನ್ನಿಧ್ಯ ವೃದ್ದಿಯಾಗಿ ನಂಬಿಕೆಗೆ ಬಲ ನೀಡಿದೆ ಎಂದು ಶ್ರೀಕ್ಷೇತ್ರಕ್ಕೆ 12 ವರ್ಷಗಳ ಹಿಂದೆ ಭೇಟಿ ನೀಡಿದ ನೆನಪುಗಳು ಮತ್ತು ಪ್ರಸ್ತುತ ಆಗಿರುವ ಅಭಿವೃದ್ದಿ ಪ್ರಕ್ರಿಯೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ , ಮನಸ್ಸನ್ನು ಅರಳಿಸುವ ಭಾರತೀಯ ಸಂಸ್ಕøತಿಯನ್ನು ಪ್ರತಿಯೊಬ್ಬರೂ ಜತನದಿಂದ ಅನುಸರಿಸುವ ಅಗತ್ಯ ಇಂದಿದೆ. ಮನಸ್ಸನ್ನು ಕೆರಳಿಸುವ ಪಾಶ್ಚಿಮಾತ್ಯದ ಅನುಕರಣೆ ಸರ್ವನಾಶಕ್ಕೆ ಕಾರಣವಾಗುವುದೆಂಬ ಪ್ರಜ್ಞೆ ಜಾಗೃತವಾಗಿರಲಿ ಎಂದು ತಿಳಿಸಿದರು. ಎಲ್ಲರೊಂದಿಗೆ ಒಂದಾಗಿ ಬದುಕುವ ಭಾರತೀಯ ಸನಾತನತೆ ಆಧ್ಯಾತ್ಮಿಕ ಹಿನ್ನೆಲೆಯಿಂದ ರೂಪುಗೊಂಡಿರುವುದು. ನಮ್ಮ ಅಂತರ್ ಬೋಧೆಯ ಶಕ್ತಿಯ ಜಾಗೃತಿಗಾಗಿ ದೇವಾಲಯಗಳು, ಧಾರ್ಮಿಕ ಸಭೆಗಳು ಪುನಶ್ಚೇತನ ನೀಡುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಜೊತೆಗೆ ತಮ್ಮ ಬಾಲ್ಯ ಕಾಲದಲ್ಲಿ ತವರು ನೆಲ ಪೆರ್ಲದಲ್ಲಿ ಓಡಾಡಿದ ಜೀವನ ನೆನಪಿಸಿದರು.
ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದ ಯುವ ವಾಗ್ಮಿ ಅಕ್ಷತಾ ಬಜಪೆ ಅವರು, ಕೇರಳ ದೇವರ ನಾಡು ಎಂಬ ಹೆಗ್ಗಳಿಕೆಯಿಂದ ಆಧ್ಯಾತ್ಮಿಕ ಅನುಭೂತಿ ನೀಡುವ ವಿಶಿಷ್ಟ ಪ್ರದೇಶವಾಗಿ ಗುರುತಿಸಿಕೊಂಡಿದೆ. ಆದರೆ ಹೊಸ ತಲೆಮಾರು ಎಲ್ಲವನ್ನೂ ಪ್ರಶ್ನಾರ್ಹ ದೃಷ್ಟಿಯಿಂದ ದಿಟ್ಟಿಸುವ ಮೂಲಕ ಚಿಂತನೆಗೆ ಎಳೆದೊಯ್ಯುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಆಚರಣೆಯಲ್ಲಿನ ವೈಜ್ಞಾನಿಕ, ತಾರ್ಕಿಕ ಮೌಲ್ಯಗಳನ್ನು ಹೆಚ್ಚು ಅರಿತಿರಬೇಕಾದ ಮಹತ್ವವನ್ನು ಗ್ರಹಿಸಬೇಕು ಎಂದು ತಿಳಿಸಿದರು. ಬದುಕಿಗೆ ಸ್ವಾಭಿಮಾನ, ಭದ್ರತೆ ಹಾಗೂ ಆಧ್ಯಾತ್ಮಿಕ ಶಕ್ತಿಯ ಮೌಲ್ಯಗಳೊಂದಿಗೆ ಋಜು ಮಾರ್ಗದಲ್ಲಿ ಮುನ್ನಡೆದಲ್ಲಿ ಬದುಕು ಸುಂದರವಾಗುವುದೆಂದು ಅವರು ತಿಳಿಸಿದರು. ಮನೆ, ಕುಟುಂಬ, ಸಮಾಜ, ರಾಷ್ಟ್ರದ ಬೇರುಗಳು ಗಟ್ಟಿಯಾದಾಗ ಬದುಕು ಸಾರ್ಥಕತೆಯೊಂದಿಗೆ ಆದರ್ಶವಾಗುತ್ತದೆ ಎಂದು ಕರೆನೀಡಿದರು.
ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆಶಾರದಾ ವೈ, ಜಿಲ್ಲಾ ಪಂಚಾಯತಿ ಸದಸ್ಯೆ ಪುಷ್ಪ ಅಮೆಕ್ಕಳ, ಬ್ಲಾಕ್ ಪಂಚಾಯತಿ ಸದಸ್ಯೆ ಸವಿತಾ ಬಾಳಿಕೆ, ಇಂದಿರಾ ಉಪಸ್ಥಿತರಿದ್ದು ಶುಭಹಾರೈಸಿದರು. ಬಹುಮುಖ ಪ್ರತಿಭೆ ಸನ್ನಿಧಿ ಟಿ.ರೈ ಪೆರ್ಲ, ರಾಮಾಯಣ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆ ದೀಕ್ಷಾ ರೈ ಬಜಕ್ಕೂಡ್ಲು, ಅಂತರಾಷ್ಟ್ರೀಯ ತೋಬಾಲ್ ಕ್ರೀಡಾಪಟು ದೀಪಿಕಾ ಶೆಟ್ಟಿ ಪೂನನಡ್ಕ ಮುಕ್ಕೂರು, ಕಲರ್ ಸೂಪರ್‍ನ ಕನ್ನಡ ಕೋಗಿಲೆ ಕಲಾವಿದೆ ಅಪೇಕ್ಷಾ ಪೈ ಬಳ್ಳಂಬೆಟ್ಟು ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಶಿಕ್ಷಕಿ ವೀಣಾ ಸ್ವಾಗತಿಸಿ, ವಂದಿಸಿದರು. ಸ್ನೇಹಾ ಬಾಳಿಕೆ ಕಾರ್ಯಕ್ರಮ ನಿರೂಪಿಸಿದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳು,10ರಿಂದ ಭಜನೆ, ಕುಣಿತ ಭಜನೆ ನಡೆಯಿತು. ರಾತ್ರಿ 8ರಿಂದ ಯೋಗೀಶ್ ಶರ್ಮ ಬಳ್ಳಪದವು ಬಳಗದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು.
ಗುರುವಾರ ಬೆಳಿಗ್ಗೆ 6ರಿಂದ ವೈದಿಕ ಕಾರ್ಯಕ್ರಮಗಳು, 10ರಿಂದ ಭಜನೆ, ಕುಣಿತ ಭಜನೆ, ಸಿಂಚನಾ ಮ್ಯೂಸಿಕಲ್ಸ್ ಪೆರ್ಲ ಇವರ ಭಕ್ತಿಗಾನ ಸುಧಾ ನಡೆಯಿತು. ಸಂಜೆ ಧಾರ್ಮಿಕ ಸಭೆ ನಡೆಯಿತು. ರಾತ್ರಿ 8ರಿಂದ ಅಂಜಲಿ ಪೆರ್ಲ ಬಳಗದ ಗಾನಾಂಜಲಿ ಕಾರ್ಯಕ್ರಮ ನಡೆಯಿತು.
ಇಂದಿನ ಕಾರ್ಯಕ್ರಮ:
ಫೆ.1ರಂದು ಬೆಳಗ್ಗೆ 5ರಿಂದ 108 ಕಾಯಿ ಗಣಪತಿ ಹವನ,10ರಿಂದ ಧ್ವಜ ಪ್ರತಿಷ್ಠೆ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಭಜನೆ, ಮಧ್ಯಾಹ್ನ 2ರಿಂದ ರಾಮಕೃಷ್ಣ ಕಾಟುಕುಕ್ಕೆ ಬಳಗದ ದಾಸವಾಣಿ, 3.30ರಿಂದ ಬಿಬಿ ಕ್ರಿಯೇಷನ್ಸ್ ಪಾಣಾಜೆ ಇವರಿಂದ 'ಮರೆಯದ ಹಾಡು', ಸಂಜೆ 5.30ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ, ಶ್ರೀ ಕ್ಷೇತ್ರ ನಾರಂಪಾಡಿ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆಯಲ್ಲಿ ಆಕಾಶವಾಣಿ ಮಂಗಳೂರು ಕಾರ್ಯ ನಿರ್ವಾಹಕ ಸದಾನಂದ ಪೆರ್ಲ ಅವರು ಧಾರ್ಮಿಕ ಭಾಷಣ ಮಾಡುವರು. ರಾತ್ರಿ 8ರಿಂದ ಖ್ಯಾತ ವಾಗ್ಮಿ ನಿತ್ಯಾನಂದ ವಿವೇಕ ವಂಶಿ ಬಳಗದ 'ಶಿವ ಭಾರತ' ಹಿಂದವೀ ಸ್ವರಾಜ್ಯ ಸ್ಥಾಪನೆಯ ವೀರಗಾಥೆ ನಡೆಯಲಿದೆ.
ಫೆ.2ರಂದು ಬೆಳಗ್ಗೆ 8ರಿಂದ ವೈದಿಕ ಕಾರ್ಯಕ್ರಮ, 10ರಿಂದ ಭಜನೆ, ಮಧ್ಯಾಹ್ನ 1ರಿಂದ ವಿದ್ಯಾಪಲ್ಲವಿ ಸಂಗೀತ ಶಾಲೆ ಪೆರ್ಲ ವಿದ್ಯಾರ್ಥಿಗಳ ಭಕ್ತಿ ಭಾವ ಸಂಗಮ, ಭಜನೆ, ಸಂಜೆ 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಬ್ರಹ್ಮಶ್ರೀ ವೇ.ಮೂ.ವಿಷ್ಣು ಅಸ್ರ ಉಳಿಯ ಆಶೀರ್ವಚನ ನೀಡಲಿದ್ದು ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ವೇ.ಮೂ.ರವೀಶ ತಂತ್ರಿ ಕುಂಟಾರು ಧಾರ್ಮಿಕ ಭಾಷಣ ಮಾಡುವರು. ರಾತ್ರಿ 8ರಿಂದ ಶಿವಾಂಜಲಿ ನೃತ್ಯ ಕಲಾ ಕೇಂದ್ರ ಪೆರ್ಲ ನಿರ್ದೇಶಕಿ ಕಾವ್ಯ ಭಟ್ ಶಿಷ್ಯವೃಂದದಿಂದ ಭರತ ನಾಟ್ಯ, ಜಾನಪದ ನೃತ್ಯ, ಭಸ್ಮಾಸುರ ಮೋಹಿನಿ ನೃತ್ಯರೂಪಕ ಪ್ರಸ್ತುತಿಗೊಳ್ಳಲಿದೆ.