ಮಧೂರು: ಪುರಾಣ ಪ್ರಸಿದ್ಧ ಐತಿಹಾಸಿಕ ಕ್ಷೇತ್ರ ಮಧೂರಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಮತ್ತು ಜೀರ್ಣೋದ್ಧಾರ ಕಾರ್ಯಗಳು ಪ್ರಗತಿಯಲ್ಲಿವೆ. ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೇರು ದೇವಸ್ಥಾನಗಳ ಸಾಲಿನಲ್ಲಿ ಒಂದಾಗಿರುವ ಮಧೂರು ಕ್ಷೇತ್ರದ ನವೀಕರಣ ಕಾಮಗಾರಿಗಳು 2018 ರ ಎಪ್ರಿಲ್ ತಿಂಗಳಲ್ಲಿ ಆರಂಭಗೊಂಡಿದ್ದು, ಮುಂದುವರಿಯುತ್ತಿವೆ. ಐದು ಶತಮಾನಗಳ ಹಿಂದೆ ಕಟ್ಟಲ್ಪಟ್ಟ ದೇವಸ್ಥಾನವು ಗಜಪೃಷ್ಠಾಕಾರಲ್ಲಿದೆ. ದಿನಂಪ್ರತಿ ನೂರಾರು ಮಂದಿ ಭಕ್ತರು ಆಗಮಿಸಿ ಶ್ರೀ ದೇವರ ದರ್ಶನಗೈದು ಪುನೀತರಾಗುತ್ತಿದ್ದಾರೆ. ಹಚ್ಚ ಹಸುರಿನ ಸುಂದರ ಬಯಲು ಗದ್ದೆ ಮತ್ತು ತೋಟ ಪ್ರದೇಶಗಳಿರುವ ಸ್ಥಳ ಇದಾಗಿದ್ದು, ದೇವಸ್ಥಾನದ ಸನಿಹದಲ್ಲೇ ಮಧುವಾಹಿನಿ ನದಿ ಹರಿಯುತ್ತದೆ. ದೇವಸ್ಥಾನದ ಗರ್ಭಗೃಹದ ಪ್ರಧಾನ ನಿರ್ಮಿತಿ ಮೂರು ಹಂತದ ಗುಮ್ಮಟ ಆಕೃತಿಯಲ್ಲಿದ್ದು, ಮೇಲ್ಭಾಗವು ಶಿಖರಾಕೃತಿಯಲ್ಲಿದೆ. ತೀವ್ರ ಮಳೆಗಾಲದ ವೇಳೆ ಮಧುವಾಹಿನಿ ಉಕ್ಕಿ ಹರಿದು ದೇವಸ್ಥಾನದ ಪ್ರಾಂಗಣವನ್ನು ಪ್ರವೇಶಿಸುತ್ತಾಳೆ. ದೇವಸ್ಥಾನದ ಮೂಲ ದೇವ ಸದಾಶಿವನಾಗಿದ್ದು, ಪಾಂಡವರಿಂದ ಪೂಜಿಸಲ್ಪಟಿದ್ದ ಎನ್ನಲಾಗುತ್ತದೆ.
ಮದನಂತೇಶ್ವರ ಲಿಂಗರೂಪಿಯಾಗಿ ಪೂಜಿಸಲ್ಪಟ್ಟರೆ, ಸಿದ್ದಿವಿನಾಯಕನಿಗೆ ಮೂರ್ತಿ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ದೇವರು ಉದ್ಭವ ಮೂರ್ತಿಯಾಗಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ ಬಣ್ಣಿಸುತ್ತಾರೆ. ನವೀಕರಣ, ಜೀರ್ಣೋದ್ಧಾರ ಕೈಂಕರ್ಯಕ್ಕೆ ಒಟ್ಟು 30 ಕೋಟಿ ರೂ. ಅವಶ್ಯವಾಗಿದೆ. ದೇವಸ್ಥಾನದ ಗರ್ಭಗೃಹದ ಮೇಲು ಹೊದಿಕೆ ಶಿಥಿಲಾವಸ್ಥೆಗೆ ತಲುಪಿದ ಕಾರಣ ದೇವಸ್ಥಾನದ ಜೀರ್ಣೋದ್ಧಾರವನ್ನು ತಿಂಗಳುಗಳ ಹಿಂದೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮೇಲ್ಛಾವಣಿಗೆ ಆಧಾರಸ್ಥಂಭವಾಗಿದ್ದ 12 ಪ್ರಮುಖ ಕಂಬಗಳು ಶಿಥಿಲವಾಗಿತ್ತು, ಮಾತ್ರವಲ್ಲದೆ ಗೋಡೆಯು ಸುಮಾರು ಎರಡು ಅಡಿಗಳಷ್ಟು ಆಳಕ್ಕೆ ಇಳಿದಿತ್ತು, ತಡವಾದಲ್ಲಿ ಇಡೀ ದೇವಸ್ಥಾನಕ್ಕೆ ಅಪಾಯವಿದ್ದ ಕಾರಣ ದೇವಸ್ಥಾನದ ನವೀಕರಣ ಕಾಮಗಾರಿಯನ್ನು ತಿಂಗಳುಗಳ ಹಿಂದೆಯೇ ಆರಂಭಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಕಳೆದ 500 ವರ್ಷದಿಂದ ದೇವಸ್ಥಾನವು ಮಳೆ, ಬಿಸಿಲು ಸಹಿತ ಹವಾಮಾನ ವೈಪರೀತ್ಯಗಳನ್ನು ಎದುರಿಸಿ ಭಕ್ತಜನಮಾನಸವನ್ನು ಹರಸಿದೆ ಎಂದು ಅವರು ಹೇಳುತ್ತಾರೆ.
ನವೀಕರಣ ಕಾರ್ಯ
ಎಡನೀರು ಸಂಸ್ಥಾನದ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿದ್ದಾರೆ. ಕುಂಬಳೆ ಸೀಮೆಯ ಮಾಯಿಪ್ಪಾಡಿ ಅರಮನೆಯ ದಾನಮಾರ್ತಾಂಡವರ್ಮ ರಾಜ ರಾಮಂತರಸರುಗಳು -13 ದೇವಸ್ಥಾನದ ಅನುವಂಶಿಕ ಟ್ರಸ್ಟಿಯಾಗಿದ್ದಾರೆ. ನಿವೃತ್ತ ಐಎಫ್‍ಎಸ್ ಅಧಿಕಾರಿ ಯು.ಟಿ.ಆಳ್ವ ಸಮಿತಿ ಅಧ್ಯಕ್ಷರಾಗಿದ್ದಾರೆ.
ನವೀಕರಣ ಕಾಮಗಾರಿಯು 13 ಪ್ರಮುಖ ಘಟ್ಟವನ್ನು ಹೊಂದಿದೆ- ಪ್ರಥಮವಾಗಿ ದೇವಸ್ಥಾನದ ಗರ್ಭಗೃಹ, ನಂತರದಲ್ಲಿ ಕಾಶಿ ವಿಶ್ವನಾಥ, ಶಾಸ್ತಾರ, ದುರ್ಗಾಪರಮೇಶ್ವರಿ, ಸುಬ್ರಹ್ಮಣ್ಯ ಮತ್ತು ಸದಾಶಿವ ಗುಡಿ, ನಮಸ್ಕಾರ ಮಂಟಪ, ಹೊರಾವರಣ, ಪೂರ್ವ ಮತ್ತು ಪಶ್ಚಿಮದಲ್ಲಿರುವ ರಾಜಗೋಪುರ, ಯಾಗಶಾಲೆ, ಅರ್ಚಕರ ವಿಶ್ರಾಂತಿಧಾಮ, ವೇದಪಾಠಶಾಲೆ, ಅನ್ನಛತ್ರ, ಅತಿಥಿಗೃಹ, ಧರ್ಮಛತ್ರ, ಸಿಬ್ಬಂದಿ ಕೊಠಡಿ, ತೀರ್ಥಕೆರೆ ಮತ್ತು ಮಳೆಗಾಲದಲ್ಲಿ ಪ್ರವಾಹ ಬಾರದೇ ಇರುವಂತೆ ಮಧುವಾಹಿನಿ ನದಿ ಸಮೀಪ ತಡೆಗೋಡೆ ನಿರ್ಮಾಣ ಕಾರ್ಯ ನಡೆಯಲಿದೆ. ಮಲಬಾರು ದೇವಸ್ವಂ ಮಂಡಳಿ ಅಧೀನದಲ್ಲಿರುವ ದೇವಸ್ಥಾನದ ನವೀಕರಣ ಯೋಜನೆಗೆ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.
ದೇವಸ್ಥಾನದ ಪ್ರತಿಯೊಂದು ಗುಡಿಗೋಪುರಗಳನ್ನು ಹಿಂದಿರುವಂತೆ ನವೀಕರಿಸಲಾಗುವುದು, ಗರ್ಭಗೃಹದ ನೆಲಕ್ಕೆ ಹಿಂದೆ ಇದ್ದ ಕೆಂಪು ಕಲ್ಲಿನ ಹಾಸನ್ನು ಬದಲಾಯಿಸಿ, ಗ್ರಾನೈಟ್ ಅಳವಡಿಸಲಾಗುವುದು. ಮುಂಬರುವ ಮಾರ್ಚ್ ತಿಂಗಳ ಒಳಗಾಗಿ ದೇವಸ್ಥಾನದ ಗರ್ಭಗೃಹದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಲಾಗಿದೆ. ಒಳಾಂಗಣದ ಗೋಡೆಯ ಹೆಚ್ಚುವರಿ ಕೆಲಸ ಕಾರ್ಯಗಳು ಮುಂದುವರಿಯಲಿವೆ ಎಂದು ಅವರು ತಿಳಿಸಿದ್ದಾರೆ. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ನವೀಕರಣ ಕಾರ್ಯಕ್ಕೆ ಅಗತ್ಯವಾದ ಧನಸಹಾಯವನ್ನು ಸ್ವೀಕರಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ಪ್ರಸ್ತುತ ನವೀಕರಣಗೊಳ್ಳುತ್ತಿರುವ ದೇವಸ್ಥಾನದ ಪೂಜಾ ಸಮಯದಲ್ಲಿ ಬದಲಾವಣೆಯಾಗಿದೆ. ಮುಂಜಾನೆ 4 ಗಂಟೆಗೆ ದೇವಸ್ಥಾನ ತೆರೆಯುತ್ತದೆ, ಬೆಳಿಗ್ಗೆ 6 ಗಂಟೆಗೆ ಪೂಜೆ ನಡೆಯುತ್ತದೆ, ಮಧ್ಯಾಹ್ನದ ಪೂಜೆ 9 ಗಂಟೆಗೆ ಮತ್ತು ರಾತ್ರಿ ಪೂಜೆ 7 ಗಂಟೆಗೆ ಪೂರ್ಣಗೊಳ್ಳುತ್ತದೆ.
ಏನಂತಾರೆ:
ದೇವಸ್ಥಾನ ನವೀಕರಣದ ಪ್ರಥಮ ಹಂತದ ಕೆಲಸ ಕಾರ್ಯಗಳು ಮುನ್ನಡೆಯುತ್ತಿವೆ, ಮುಂದಿನ ವರ್ಷದೊಳಗಾಗಿ ದೇವಸ್ಥಾನದ ಬ್ರಹ್ಮಕಲಶ ನೆರವೇರಲಿದೆ. ಪ್ರಥಮ ಹಂತದ ಕಾಮಗಾರಿಗೆ ಸುಮಾರು 16-18 ಕೋಟಿ ರೂ. ಖರ್ಚು ಬರಲಿದೆ. ಮರದ ಕೆತ್ತನೆ ಕೆಲಸಕ್ಕೆ ಕರ್ನಾಟಕದ ನುರಿತ ಕಾರ್ಮಿಕರಿದ್ದಾರೆ. ಸಮಯ ಪರಿಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿಟ್ಟುಕೊಳ್ಳಲಾಗಿದ್ದು, ಅನ್ನ ಛತ್ರ, ಧರ್ಮಛತ್ರ ಸಹಿತ ಕಚೇರಿ ನಿರ್ಮಾಣದ ಉದ್ದೇಶವಿದೆ.
ಜಯದೇವ ಖಂಡಿಗೆ
ಕಾರ್ಯದರ್ಶಿ
ಮಧೂರು ಜೀರ್ಣೋದ್ಧಾರ ಸಮಿತಿ