ಉಪ್ಪಳ: ಗಡಿನಾಡಿನ ಕನ್ನಡ ಶಾಲೆಗಳ ವಿದ್ಯಾರ್ಥಿಗಳ ಪಠ್ಯ ಬೋಧನೆಗೆ ಮಲೆಯಾಳ ಮಾತ್ರ ಅರಿತಿರುವ ಶಿಕ್ಷಕರ ನೇಮಕಾತಿ ವಿರುದ್ದ ಪ್ರತಿಭಟನೆ ತೀವ್ರಗೊಂಡಿದ್ದು, ಸೋಮವಾರ ಲೋಕಸೇವಾ ಆಯೋಗದಿಂದ ನೇಮಕವಾಗಿ ಶಾಲೆಗಳಿಗೆ ಅಧಿಕೃತವಾಗಿ ಹಾಜರಾಗಲು ಆಗಮಿಸಿದಾಗ ವಿದ್ಯಾರ್ಥಿಗಳು, ಕನ್ನಡ ಹೋರಾಟ ಸಮಿತಿ ಸದಸ್ಯರು, ಮಕ್ಕಳ ಹೆತ್ತವರು ತಡೆದು ತಾಕೀತು ನೀಡಿ ಕಳಿಸಿದ ಘಟನೆ ನಡೆದಿದೆ.
ಮಂಜೇಶ್ವರ ತಾಲೂಕು ವ್ಯಾಪ್ತಿಯ ಪೈವಳಿಕೆ ಸರಕಾರಿ ಕನ್ನಡ ಹೈಸ್ಕೂಲು ಕಾಯರ್ಕಟ್ಟೆ ಹಾಗೂ ಬೇಕೂರು ಸರಕಾರಿ ಹೈಸ್ಕೂಲು ಗಳ ಕನ್ನಡ ವಿಜ್ಞಾನ ವಿಭಾಗ ಶಿಕ್ಷಕರಾಗಿ ಮಲೆಯಾಳ ಮಾತ್ರ ಗೊತ್ತಿರುವ ಶಿಕ್ಷಕರು ನೇಮಕವಾಗಿದ್ದರು. ಈ ಶಿಕ್ಷಕರು ಕಳೆದ ಶುಕ್ರವಾರ ಶಾಲೆಗೆ ಕರ್ತವ್ಯ ನಿರ್ವಹಿಸಲು ಆಗಮಿಸಿದಾಗ ತಡೆಹಿಡಿದು ಕಳಿಸಲಾಗಿತ್ತು. ಆದರೆ ಕರ್ತವ್ಯಕ್ಕೆ ಹಾಜರಾಗಿ ಮೊದಲ ಸಹಿ ದಾಖಲಿಸಲು ಕೊನೆಯ ದಿನವಾದ ಸೋಮವಾರವೂ ಅದೇ ಶಿಕ್ಷಕರು ಮತ್ತೆ ಆಗಮಿಸುತ್ತಿದ್ದಂತೆ ತಡೆಹಿಡಿದು ಕಳಿಸಲಾಯಿತು.
ಬೇಕೂರು ಶಾಲಾ ಹೈಸ್ಕೂಲು ವಿಭಾಗ ಕನ್ನಡ ವಿಜ್ಞಾನ ಶಿಕ್ಷಕಿಯಾಗಿ ತಿರುವನಂತಪುರ ನಿವಾಸಿ ನಿಭಾ ಆರ್.ಆರ್ ಎಂಬವರು ಲೋಕಸೇವಾ ಆಯೋಗದ ಆದೇಶ ಪ್ರತಿಯೊಂದಿಗೆ ಆಗಮಿಸಿದರು. ಈ ವೇಳೆ ಶಾಲೆಯ ಕನ್ನಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಿರತರಾದರು. ಜೊತೆಗೆ ಮಕ್ಕಳ ಹೆತ್ತವರು, ರಕ್ಷಕ ಶಿಕ್ಷಕ ಸಂಘ, ಮಾತೃಸಂಘ, ಜನಪ್ರತಿನಿಧಿಗಳು ಪ್ರತಿಭಟನೆಗೆ ಕೈಜೋಡಿಸಿದರು. ಕನ್ನಡ ಹೋರಾಟ ಸಮಿತಿಯ ಕೆ.ಭಾಸ್ಕರ, ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆಗಮಿಸಿ ಪ್ರತಿಭಟನಾ ನಿರತರೊಂದಿಗೆ ಸಮಾಲೋಚಿಸಿ ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಡಾ.ಗಿರೀಶ್ ಚೊಯೆಲ್ ಅವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯ ಬಗ್ಗೆ ವಿಷದಪಡಿಸಿದರು. ಬಳಿಕ ನಡೆದ ಚರ್ಚೆಯಲ್ಲಿ ಮಲೆಯಾಳಿ ಶಿಕ್ಷಕಿ ಕನ್ನಡ ಕಲಿತು ಬರುವಲ್ಲಿಯವರೆಗೆ ರಜೆಯ ಮೇಲೆ ತೆರಳಲು ಸೂಚಿಸಲಾಯಿತು. ಈ ವೇಳೆ ಮಂಜೇಶ್ವರ ಜಿಲ್ಲಾ ಶಿಕ್ಷಣಾಧಿಕಾರಿ ಇ.ನಂದಿಕೇಶನ್, ಜಿ.ಪಂ.ಸದಸ್ಯೆ ಫರೀದಾ ಝಕೀರ್, ಮಂಜೇಶ್ವರ ಠಾಣಾಧಿಕಾರಿ ಶಾಜಿ ಉಪಸ್ಥಿತರಿದ್ದರು. ಬೇಕೂರು ಶಾಲೆಯಲ್ಲಿ 900ಕ್ಕಿಂತಲೂ ಮಿಕ್ಕಿದ ಕನ್ನಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೈಸ್ಕೂಲು ವಿಭಾಗದಲ್ಲಿ 30ಕ್ಕಿಮತ ಮಿಕ್ಕಿದ ಕನ್ನಡ ವಿದ್ಯಾರ್ಥಿಗಳ ಸ್ಥಿತಿ ಸಂಕಷ್ಟಮಯವಾಗಿದೆ.
ಪೈವಳಿಕೆಯ ಕಾಯರ್ಕಟ್ಟೆ ಶಾಲೆಗೂ ಸೋಮವಾರ ತಿರುವನಂತಪುರ ನಿವಾಸಿ ಮಲೆಯಾಳಿ ಶಿಕ್ಷಕ ಆಗಮಿಸಿದ್ದು, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾರ್ ಬಾಯಿಕಟ್ಟೆ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳಿಕ ನಡೆದ ಮಾತುಕತೆಯಲ್ಲಿ ಆ ಶಿಕ್ಷಕನಿಗೂ ಕನ್ನಡ ಕಲಿತು ಬರಲು ರಜೆಯ ಮೇಲೆ ಕಳಿಸಲಾಯಿತು.
ಬದಿಯಡ್ಕದ ಪೆರಡಾಲ ಸರಕಾರಿ ಹೈಸ್ಕೂಲಿಗೆ ವಿಜ್ಞಾನ ವಿಭಾಗ ಕನ್ನಡ ಮಾಧ್ಯಮಕ್ಕೆ ಕೊಲ್ಲಂ ನಿವಾಸಿಯಾದ ಶಿಕ್ಷಕ ಸೋಮವಾರ ಕರ್ತವ್ಯಕ್ಕೆ ಆಗಮಿಸಿದಾಗ ತಡೆಹಿಡಿಯಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಜಿಲ್ಲಾಪಂಚಾಯತ್ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಈ ಸಂದರ್ಭದಲ್ಲಿ ಮಾತನಾಡಿ ರಾಷ್ಟ್ರದಲ್ಲಿ ವಿದ್ಯಾಭ್ಯಾಸವು ಪ್ರತಿಯೊಬ್ಬನ ಮೂಲಭೂತ ಹಕ್ಕಾಗಿದೆ. ಮಾತೃಭಾಷೆಯಲ್ಲಿ ಕಲಿಸಬೇಕಾಗಿರುವುದು ಸರಕಾರದ ಜವಾಬ್ದಾರಿಯಾಗಿದೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡದವರಲ್ಲದ ಒಬ್ಬರನ್ನು ನೇಮಕಮಾಡಿರುದನ್ನು ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಬಲ್ಲ ಶಿಕ್ಷರನ್ನೇ ನೇಮಿಸಬೇಕು ಎಂಬ ಕಾನೂನಿದೆ. ಸರಕಾರ ತನ್ನ ಪೊಲೀಸ್ ಸೇನೆಯನ್ನುಪಯೋಗಿಸಿ ಬಲವಂತದಿಂದ ಮುಂದುವರಿದರೆ ಅದನ್ನು ನಾವು ಎದುರಿಸುತ್ತೇವೆ. ಕಾನೂನು ಉಲ್ಲಂಘಿಸಿ ಕನ್ನಡಿಗಿರಲ್ಲದವರನ್ನು ನೇಮಕಮಾಡಿ ಅದನ್ನು ಕಾನೂನಾತ್ಮಕವಾಗಿ ಸಾಬೀತುಪಡಿಸಲು ಪ್ರಯತ್ನಿಸಿದರೆ ಯಾವುದೇ ಬೆಲೆತೆತ್ತಾದರೂ ಆ ಕಾನೂನನ್ನು ನಾವು ಊರವರೆಲ್ಲ ಒಗ್ಗಟ್ಟಿನಿಂದ ಉಲ್ಲಂಘಿಸುತ್ತೇವೆ ಎಂದರು.
ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಅನ್ನಡ್ಕ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಶಿಕ್ಷಕನನ್ನು ಕನ್ನಡ ಕಲಿತು ಬರಲು ರಜೆಯ ಮೇರೆಗೆ ಕಳಿಸಲಾಯಿತು.
ಏನಂತಾರೆ:
ಸರಕಾರದಿಂದ ನೇಮಕಗೊಂಡ ಅಧ್ಯಾಪಕರು 10 ದಿನಗಳ ಕಾಲಾವಕಾಶವನ್ನು ಕೇಳಿರುತ್ತಾರೆ. ಅಷ್ಟುದಿನಗಳ ಕಾಲ ಅವರು ಶಾಲೆಯಲ್ಲಿ ನೇಮಕಾತಿಗಾಗಿ ಆಗಮಿಸುವುದಿಲ್ಲ. ನಂತರ ಕನ್ನಡದ ಕುರಿತಾಗಿ ಅವರ ತಿಳುವಳಿಕೆಯನ್ನು ಪಡೆದುಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು
ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಡಾ.ಗಿರೀಶ್ ಚೋಯೆಲ್.