ಉಪ್ಪಳ: ಅತಿ ಹಗುರವಾದ ನೀರಿನಲ್ಲಿ ತೇಲುವ ಕಲ್ಲೊಂದು ಉಪ್ಪಳ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಬಾಯಾರುಪದವು ಸಮೀಪದ ಕನಿಯಾಲ ನಿವಾಸಿ ವಸತಿ ನಿರ್ಮಾಣ ಕಾರ್ಮಿಕ ನಾಗೇಶ ಪಡೀಲ್ ಎಂಬವರಿಗೆ ಅಪರೂಪದ ಪ್ರಕೃತಿ ವಿಸ್ಮಯದ ಕಲ್ಲು ಸಿಕ್ಕಿದೆ. ಕಳೆದ ಶುಕ್ರವಾರದಂದು ಉಪ್ಪಳ ಮುಸೋಡಿ ಪ್ರದೇಶದಲ್ಲಿ ಮನೆ ನಿರ್ಮಾಣ ಕಾಮಗಾರಿಯನ್ನು ಮುಗಿಸಿ ವಾಯು ವಿಹಾರಕ್ಕೆಂದು ಸಮುದ್ರ ಕಿನಾರೆಗೆ ತೆರಳಿದ್ದಾಗ ವಿಶೇಷ ಕಲ್ಲು ಪತ್ತೆಯಾಗಿದೆ. ಸುಖಾಸುಮ್ಮನೆ ಸಮುದ್ರಕ್ಕೆ ಎಸೆಯಲೆಂದು ಕಲ್ಲನ್ನು ಹೆಕ್ಕಿದ್ದು, ಸಾಮಾನ್ಯ ಕಲ್ಲಿನ ಗಾತ್ರಕ್ಕೆ ಹೋಲಿಸಿದರೆ ಈ ಕಲ್ಲು ಅತಿ ಹಗುರವಾಗಿತ್ತೆನ್ನಲಾಗಿದೆ, ಬಹಳ ಸೋಜಿಗ ಮೂಡಿಸಿದ ಕಲ್ಲನ್ನು ನಾಗೇಶ್ ಜೋಪಾನವಾಗಿರಿಸಿ ಮನೆಗೆ ಕೊಂಡೊಯ್ದಿದ್ದಾರೆ. ತೇಲುವ ಕಲ್ಲುಗಳ ಬಗ್ಗೆ ಯೂಟ್ಯೂನ್ ನಂತಹ ಅಂತರ್ಜಾಲ ತಾಣಗಳಲ್ಲಿ ನೋಡಿ ತಿಳಿದಿದ್ದ ನಾಗೇಶ್ ಕಲ್ಲನ್ನು ಜಾಣ್ಮೆಯಿಂದ ಸಂರಕ್ಷಿಸಿ ಪರೀಕ್ಷಿಸಿದ್ದಾರೆ. ಕಲ್ಲನ್ನು ನೀರಿನ ಬಕೆಟ್ ಒಂದರಲ್ಲಿ ಹಾಕಿದಾಗ ಕಲ್ಲು ತೇಲುತ್ತಿದ್ದುದನ್ನು ಕಂಡು ಪುಳಕಿತರಾದ ಅವರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲೂ ಹರಿಯಬಿಟ್ಟಿದ್ದಾರೆ, ಮಾತ್ರವಲ್ಲದೆ ಕಲ್ಲನ್ನು ಒಂದು ದಿನವಿಡಿ ನೀರಿನಲ್ಲೇ ನೆನೆಸಿದ್ದು, ನಂತರ ಪುನಃ ಬಕೆಟ್ ನೀರಿನಲ್ಲಿ ಹಾಕಿದಾಗ ಕೇವಲ ಅರ್ಧ ಭಾಗವಷ್ಟೇ ನೀರಿನಲ್ಲಿ ಮುಳುಗಿದ್ದು, ಇನ್ನರ್ಧ ಮೇಲ್ಭಾಗದಲ್ಲಿ ತೇಲುತ್ತಲಿತ್ತು.
ಪ್ರಾಕೃತಿಕ ವಿಸ್ಮಯದ ಇಂತಹ ಕಲ್ಲುಗಳು ಈ ಹಿಂದೆ ತಮಿಳುನಾಡಿನ ರಾಮೇಶ್ವರಂ ಮತ್ತು ದೇಶದ ಪೂರ್ವ ಕರಾವಳಿಯಲ್ಲಿ ದೊರೆತಿದ್ದು, ವರದಿಯಾಗಿತ್ತು. ತೇಲುವ ಕಲ್ಲುಗಳು ಜನಾಕರ್ಷಣೆಯ ಕೇಂದ್ರ ಬಿಂದುವಾಗಿವೆ. ಹಲವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ. ರಾಮಾಯಣ ಕಥಾನಕದಲ್ಲಿ ಲಂಕೆಗೆ ಸೇತುವೆ ನಿರ್ಮಾಣ ಸಂದರ್ಭ ಇಂತಹ ಕಲ್ಲುಗಳನ್ನೆ ಬಳಸಿದ್ದರು ಎನ್ನಲಾಗುತ್ತದೆ. ಬೃಹತ್ ಗಾತ್ರದ ತೇಲುವ ಕಲ್ಲುಗಳು ನಿಸರ್ಗ ಸೋಜಿಗವು ಆಗಿದ್ದು ವೈಜ್ಞಾನಿಕ ಮಹತ್ವವನ್ನು ಹೊಂದಿವೆ. ಪಶ್ಚಿಮ ಕರಾವಳಿಯಲ್ಲಿ ಅದರಲ್ಲೂ ಕಾಸರಗೋಡು ಜಿಲ್ಲೆಯ ಉಪ್ಪಳ ಭಾಗದಲ್ಲಿ ಇಂತಹ ಕಲ್ಲು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ.
ಸುಮಾರು 12 ಸೆಂ.ಮೀ ಉದ್ದವಿರುವ ಅಲ್ಪ ನುಣುಪು ಕಲ್ಲು ಹತ್ತು ಸೆಂ.ಮೀ ಸುತ್ತಳತೆಯನ್ನು ಹೊಂದಿದ್ದು, ಸಣ್ಣ ರಂಧ್ರಾಕೃತಿಯನ್ನು ಹೊಂದಿದೆ.
ಏನಂತಾರೆ:
ಮಧ್ಯಾಹ್ನದ ಹೊತ್ತು ಕೆಲಸ ಮುಗಿಸಿ ಉಪ್ಪಳ ಮುಸೋಡಿ ಸಮುದ್ರ ತೀರಕ್ಕೆ ತೆರಳಿದ್ದ ಸಂದರ್ಭ ಮೋಜಿಗಾಗಿ ಸಮುದ್ರಕ್ಕೆ ಎಸೆಯಲೆಂದು ಎತ್ತಿಕೊಂಡ ಕಲ್ಲು ಬಹಳ ಹಗುರವೆನಿಸಿತು. ಅಚ್ಚರಿ ಮೂಡಿಸಿದ ಕಲ್ಲನ್ನು ಕಲ್ಲೇ ಅಥವಾ ಬೇರಾವುದೇ ವಸ್ತುವೇ ಎನ್ನುವ ಬಗ್ಗೆಯೂ ಕುತೂಹಲವಿತ್ತು, ಕಲ್ಲನ್ನು ನೀರಿನಲ್ಲಿ ಹಾಕಿದಾಗ ತೇಲಲಾರಂಭಿಸಿತ್ತು, ಮನೆಗೆ ತಂದ ಕಲ್ಲನ್ನು ತಂದು ದಿನಪೂರ್ತಿ ನೀರಲ್ಲಿ ನೆನಸಿದೆ, ನಂತರ ನೀರು ತುಂಬಿದ ಬಕೆಟ್‍ನಲ್ಲಿ ಇಳಿಸಿದಾಗ ಅರ್ಧ ಭಾಗ ತೆಲುತ್ತಿತ್ತು, ಇದರಿಂದ ಇದೊಂದು ತೇಲುವ ಕಲ್ಲೆಂದು ಖಾರ್ತಿಯಾಯಿತು. ಕಲ್ಲಿನ ತೇಲುವಿಕೆಗೆ ವೈಜ್ಞಾನಿಕ ಕಾರಣಗಳಿರಬಹುದು, ಭೂಗರ್ಭ ಶಾಸ್ತ್ರಜ್ಞರು ಇದ್ದರೆ ಇಂತಹ ಕಲ್ಲಿನ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆಯಬಹುದು. ಕೆಲವರು ಶ್ರೀರಾಮ ಸೇತುವೆಯ ಕಲ್ಲಾಗಿರಲೂಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ನಾಗೇಶ ಕನಿಯಾಲ ಪಡೀಲ್
ವಸತಿ ನಿರ್ಮಾಣ ಕಾರ್ಮಿಕ
:2)
ವೈಜ್ಞಾನಿಕ ಕಾರಣ
ಬಹಳ ಹಿಂದೆ ಯಾವುದಾದರೂ ಸಮುದ್ರ ಸಮೀಪವರ್ತಿ ಪ್ರದೇಶದಲ್ಲಿ ಜ್ವಾಲಾಮುಖಿ ಉಕ್ಕಿ ಹರಿದ ಸಂದರ್ಭ ಲಾವಾರಸದ ಗುಳ್ಳೆಗಳು ನೀರಿನಲ್ಲಿ ಬೆರೆತ ಸಂದರ್ಭ ಘನೀಕೃತಗೊಂಡು, ಒಳಭಾಗದಲ್ಲಿ ಹುದುಗಿರುವ ಗುಳ್ಳೆಗಳಲ್ಲಿ ಗಾಳಿ ತುಂಬಿರುವ ಕಾರಣದಿಂದ ಇಂತಹ ಕಲ್ಲುಗಳು ನೀರಿನಲ್ಲಿ ಸುಲಭವಾಗಿ ತೇಲುತ್ತವೆ. ಹೊರ ಪದರವು ಗಟ್ಟಿಯಾಗಿರುವ ಕಾರಣ ಕಲ್ಲು ನೀರಿನಲ್ಲಿ ಎಷ್ಟು ನೆನೆದರೂ ಒಳಕ್ಕೆ ನೀರು ಸೇರದ ಕಾರಣ ಕಲ್ಲು ಬಹಳ ಹಗುರವಾಗಿ ನೀರಿನಲ್ಲಿ ತೇಲುತ್ತದೆ. ಸಾಂದ್ರತೆ ಕಡಿಮೆಯಾಗಿರುವುದು ಕೂಡಾ ಕಲ್ಲು ನೀರಿನಲ್ಲಿ ತೇಲುವಂತೆ ಮಾಡುತ್ತದೆ. ಪಳೆಯುವಿಕೆ ವಸ್ತುವೂ ಆಗಿರುವ ಸಾಧ್ಯತೆಯು ಇದೆ.
ನಂಬೀಶ ನಾರಾಯಣನ್
ಭೂಗರ್ಭ ಶಾಸ್ತ್ರಜ್ಞ
ಕಲ್ಲಿಕೋಟೆ