ಬದಿಯಡ್ಕ: ತ್ಯಾಗಮನೋಭಾವದೊಂದಿಗೆ ಯುವಕರು ಸಹಕಾರೀ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ಕಷ್ಟಗಳನ್ನು ಎದುರಿಸಿಯೂ ಕೇರಳದಲ್ಲಿ ಇಂದು ಸಹಕಾರಿ ಸಂಘಟನಾ ಜ್ಯೋತಿಯು ಬೆಳಗುತ್ತಿದೆ ಎಂದು ಸಹಕಾರ ಭಾರತಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೊಂಕೋಡಿ ಪದ್ಮನಾಭ ಹೇಳಿದರು.
ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆದ ಸಹಕಾರ ಭಾರತಿಯ ಸ್ಥಾಪನಾ ದಿನಾಚರಣೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭಾರತವು ಸಮೃದ್ಧತೆಯನ್ನು ಕಾಣಬೇಕು ಎಂಬ ಉದ್ದೇಶದಿಂದ ಸ್ಥಾಪಿತವಾದ ಸಂಘಟನೆಯು ಹೊಸತನಕ್ಕೆ ಹೊಂದಿಕೊಳ್ಳಬೇಕಿದೆ. ಸಮಾಜದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಹಕಾರಿ ಸಂಸ್ಥೆಗಳು ಪ್ರಧಾನ ಕಾರಣವಾಗಿದ್ದು, ಭಾರತೀಯ ಆರ್ಥಿಕತೆಗೆ ಬಲವನ್ನು ತಂದಿದೆ ಎಂದರು.
ಸಹಕಾರ ಭಾರತಿಯ ರಾಜ್ಯ ಸಮಿತಿಯ ಐತ್ತಪ್ಪ ಮವ್ವಾರು ಮಾತನಾಡಿ ದೇಶಕ್ಕೆ ಮಾದರಿಯಾಗಿ ಕೇರಳದಲ್ಲಿ ಸಹಕಾರ ಭಾರತಿಯು ಶಕ್ತಿಯುತವಾಗಿ ಬೆಳೆದು ಬರುತ್ತಿದೆ. ಸಂಘಟನಾತ್ಮವಾಗಿ ಅದನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ರಾಜ್ಯಸಮಿತಿಯ ಸದಸ್ಯ ಗಣೇಶ್ ಪಾರೆಕಟ್ಟ ಮಾತನಾಡಿ ಸುಮಾರು 45ರಷ್ಟು ಸಂಸ್ಥೆಗಳನ್ನು ಇಂದು ಕಾಸರಗೋಡು ಜಿಲ್ಲೆಯಲ್ಲಿ ಸಹಕಾರ ಭಾರತಿಯು ಮುನ್ನಡೆಸುವಷ್ಟು ಶಕ್ತಿಯುತವಾಗಿ ಬೆಳೆದು ನಿಂತಿದೆ ಎಂದು ಸಂಘಟನಾತ್ಮಕ ವಿಚಾರಗಳನ್ನು ಮಂಡಿಸಿದರು.
ಸಹಕಾರ ಭಾರತಿಯ ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ಕ್ಯಾಂಪ್ಕೋ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಶಂಕರನಾರಾಯಣ ಭಟ್ ಕಿದೂರು, ಶ್ರೀಕೃಷ್ಣ ಭಟ್ ಬಳಕ್ಕ, ಶಿವಶಂಕರ ಭಟ್ ಗುಣಾಜೆ ಮೊದಲಾದವರು ಪಾಲ್ಗೊಂಡಿದ್ದರು. ನೀರ್ಚಾಲು ಕೃಷಿಕರ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ಸಹಕಾರ ಭಾರತಿಯ ತಾಲೂಕು ಕಾರ್ಯದರ್ಶಿ ದಿಲೀಪ್ ಕುಮಾರ್ ವಂದಿಸಿದರು.