ಮುಳ್ಳೇರಿಯ: ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರ ಹರಿತಂ ಸಮಾರೋಪಗೊಂಡಿತು.
ಈ ದಿನಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ನಯನ ಕುಮಾರ್ ಅವರಿಂದ ಯೋಗ ಮತ್ತು ದೈಹಿಕ ಅಭ್ಯಾಸ, ವನಮಿತ್ರ ಪ್ರಶಸ್ತಿ ಪಡೆದ ಶಾಹುಲ್ ಹಮೀದ್ ಅವರಿಂದ ಮಾನವ ಮತ್ತು ವಾತಾವರಣ ವಿಷಯವಾಗಿ ತರಗತಿಗಳು, ಪ್ರಶಸ್ತಿ ವಿಜೇತ ಶಿಕ್ಷಕ ನಿರ್ಮಲ್ ಕುಮಾರ್ ಅವರಿಂದ ಕ್ರೀಡೆಯ ಮೂಲಕ ವ್ಯಕ್ತಿತ್ವ ವಿಕಸನ ವಿಷಯವಾಗಿ ತರಗತಿ, ವಿಷ್ಣು ಪ್ರಕಾಶ್ ಮುಳ್ಳೇರಿಯ ಅವರಿಂದ ಡಿಜಿಟಲೈಸೇಷನ್ ವಿಷಯವಾಗಿ ತರಗತಿ, ವಿವಿಧ ವಿಷಯವಾಗಿ ಮಾಧವ ತೆಕ್ಕೇಕರೆ, ವಿಜಯನ್ ಶಂಕರಂಪಾಡಿ ಮತ್ತು ಸುರೇಶ್ ಕುಮಾರ್, ರಾಜೇಂದ್ರ ಕೋಡೋತ್ತ್, ಸತೀಶ್ ಕೆಕೆಪುರಮ್ ಇವರಿಂದ ತರಗತಿ, ಗೆರಟೆಯಿಂದ ಕರಕುಶಲ ವಸ್ತು ತಯಾರಿಯ ಬಗ್ಗೆ ವೆಂಕಟ್ರಮಣ ಭಟ್ ತರಬೇತಿ, ಮಯೂರಿ ಮತ್ತು ವೈಷ್ಣವಿ ಬೋವಿಕ್ಕಾನ ಇವರಿಂದ ಥೈಕೊಂಡೋ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಪಡಿಯತ್ತಡ್ಕ-ಕುಂಟಾರು ರಸ್ತೆಯ ಇಕ್ಕಡೆಗಳಲ್ಲಿದ್ದ ಕಾಡನ್ನು ಕಡಿದು ಶುಚಿಗೊಳಿಸಲಾಯಿತು. ತರಕಾರಿ ಕೃಷಿಗೆ ಸಾಮೂಹಿಕವಾಗಿ ಬೀಜ ಬಿತ್ತನೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್ ಉದ್ಘಾಟಿಸಿದರು. ಎನ್‍ಎಸ್‍ಎಸ್ ನಾಯಕಿ ಅಶ್ವತಿ ಶಿಬಿರದ ವರದಿ ವಾಚಿಸಿದರು. ಕುಂಟಾರು ಶಾಲೆಯ ಮುಖ್ಯ ಶಿಕ್ಷಕಿ ಪ್ರಶಾಂತ, ಬೋವಿಕ್ಕಾನ ಶಾಲೆಯ ಶಿಕ್ಷಕಿ ಲತಾಕುಟ್ಟಿ, ಕುಂಟಾರು ಶಾಲೆಯ ವ್ಯವಸ್ಥಾಪಕ ಜಗದೀಶ್.ಕೆ ಮೊದಲಾದವರು ಉಪಸ್ಥಿತರಿದ್ದರು.
ಕುಂಟಾರು ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರನ್ ಸ್ವಾಗತಿಸಿ, ಯೋಜನಾಧಿಕಾರಿ ಪ್ರೀತಂ ವಂದಿಸಿದರು.