ಪತ್ತನಂತಿಟ್ಟು: ಶಬರಿಮಲೆ ಸನ್ನಿಧಿಗೆ 50ಕ್ಕಿಂತ ಕೆಳ ಪ್ರಾಯದ ಮತ್ತೊಬ್ಬ ಮಹಿಳೆ ಪ್ರವೇಶನಗೈದು ಪೂಜೆ ಸಲ್ಲಿಸಿದ್ದಾರೆ ಎಂಬ ಫೇಸ್‍ಬುಕ್ ಪೇಜ್ ಬುಧವಾರ ಸಂಜೆ ಬಹಿರಂಗಪಡಿಸಿದೆ.
ಚತ್ತನ್ನೂರು ಎಂಬ ಪ್ರದೇಶದ ಮಂಜು ಎಂಬ ಮಹಿಳೆ ವೇಶ ಮರೆಸಿ ಶಬರಿಮಲೆ ಯಾತ್ರೆಗೈದು ದೇವರ ದರ್ಶನ ಪಡೆಯುವಲ್ಲಿ ಸಫಲರಾಗಿದ್ದಾರೆ.ಈ ಮೂಲಕ ಪರಮೋಚ್ಚ ನ್ಯಾಯಾಲಯದ ತೀರ್ಪು ನಿರ್ವಹಿಸುವಲ್ಲಿ ಸಫಲವಾಗಲು ಸಾಧ್ಯವಾದ ತೃಪ್ತಿ ಇದೆ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ನವೋತ್ಥಾನ ಕೇರಳ ಶಬರಿಮಲೆಗೆಎಂಬ ಫೇಸ್‍ಬುಕ್ ಪೇಜ್ ಬುಧವಾರ ಅಪರಾಹ್ನ ಈ ವಿವಾದಿತ ಸಂದೇಶವನ್ನು ಪ್ರಕಟಿಸಿದೆ. ಮುದುಕಿಯ ವೇಶ ಧರಿಸಿದ ಮಂಜು ಮಂಗಳವಾರ ಸಂಜೆ 7.30ಕ್ಕೆ ಶಬರಿಮಲೆ ದೇವರ ದರ್ಶನಗೈದರು ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಆದರೆ ಮಹಿಳೆ ಪೋಲೀಸರ ಯಾವುದೇ ಸಹಾಯವನ್ನು ಪಡೆದಿರಲಿಲ್ಲ ಮತ್ತು ದೇವಾಲಯದ ತಂತ್ರಿಗಳು ಮತ್ತು ಇತರ ಸಿಬ್ಬಂದಿಗಳಿಗೆ ಇದು ಗಮನಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಫೇಸ್‍ಬುಕ್ ಸಂದೇಶದೊಂದಿಗೆ ಮಂಜು ಅವರು ಮುದುಕಿಯ ವೇಶ ಧರಿಸಿ ತೆರಳುತ್ತಿರುವ, ಮಲ್ಲಿಕಾಪುರ ಸೇತುವೆಯ ಬಳಿ ಸಾಗುತ್ತಿರುವುದು, ಪವಿತ್ರ 18 ಮೆಟ್ಟಲುಗಳನ್ನು ಏರುತ್ತಿರುವುದು ಮತ್ತು ಶಬರಿಮಲೆ ಕ್ಷೇತ್ರದಲ್ಲಿ ಎರಡು ಗಂಟೆಗಳಷ್ಟು ಹೊತ್ತು ಉಳಿದುಕೊಂಡಿರುವ ಬಗ್ಗೆ ತಿಳಿಸುವ ಮೂರು ವೀಡಿಯೋಗಳನ್ನೂ ಒಳಗೊಂಡಿದೆ. ರಾಷ್ಟ್ರೀಯ ಮುಷ್ಕರದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಕಳೆದೆರಡು ದಿನಗಳಿಂದ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದ್ದು,ಈ ಅವಕಾಶ ಬಳಸಿ ಆಕೆ ದೇವರ ದರ್ಶನ ಮಾಡಿರುವಳೆಂದು ತಿಳಿಯಲಾಗಿದೆ. ಜಾಲತಾಣದಲ್ಲಿ ಸುದ್ದಿ ಹರಡುತ್ತಿರುವಂತೆ ಮಂಜು ಅವರ ಮನೆಗೆ ಧಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.