ಮಲಪ್ಪುರಂ: ಬಿಂದು ಜೊತೆಯಲ್ಲಿ ಎರಡನೇ ಬಾರಿಗೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದ ಕನಕಾ ದುರ್ಗಾ ಮೇಲೆ ಆಕೆಯ ಅತ್ತೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕನಕಾ ದುರ್ಗಾ ಅಂಗಡಿಪುರಂ ನಲ್ಲಿರುವ ತನ್ನ ಪತಿಯ ಮನೆಗೆ ಮಂಗಳವಾರ ವಾಪಾಸ್ ಬಂದಾಗ ಮನೆಯಲ್ಲಿದ್ದ ಅತ್ತೆ ದೋಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ತಲೆಗೆ ಪೆಟ್ಟಾಗಿ ಗಾಯಗೊಂಡಿದ್ದ ಕನಕಾ ದುರ್ಗಾ ಅವರನ್ನು ಪೆರಿಂಥಾಲ್ಮಣ್ಣಾದಲ್ಲಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಂಪ್ರದಾಯಿಕ ಅಯ್ಯರ್ ಕುಟುಂಬಕ್ಕೆ ಸೇರಿರುವ ಕನಕಾ ದುರ್ಗ ಶಬರಿಮಲೆ ದೇಗುಲ ಪ್ರವೇಶಿಸಿದ ನಂತರ ಆಕೆಯಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ಅಂತರ ಕಾಯ್ದುಕೊಂಡಿದ್ದಾರೆ.
ಕನಕ ದುರ್ಗಾ ಬಿ. ಕಾಂ ಪದವೀಧರೆಯಾಗಿದ್ದು, ಪ್ರಸ್ತುತ ನಾಗರಿಕ ಪೂರೈಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾವೇಲಿ ಸ್ಟೋರ್ ವೊಂದರಲ್ಲಿ ಸಹಾಯಕ ಪ್ರಬಂಧಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆಕೆಯ ಪತಿ ಕೃಷ್ಣ ಹುನ್ನಿ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಹೋರಾಟಗಳಲ್ಲಿ ಗುರ್ತಿಸಿಕೊಂಡಿದ್ದ ಕನಕಾ ದುರ್ಗಾ,ಜನವರಿ ಮೊದಲ ವಾರ ಬಿಂದು ಜೊತೆಗೆ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ವರ್ಷ ಡಿಸೆಂಬರ್ 24 ರಂದು ಪಂಪವರೆಗೂ ಪ್ರವೇಶಿಸಿದ್ದರೂ ಭಕ್ತಾಧಿಗಳ ಪ್ರಬಲ ಪ್ರತಿಭಟನೆ ಹಿನ್ನೆಲೆಯಲ್ಲಿ ಅಯ್ಯಪ್ಪ ದೇಗುಲ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆಕೆ ದೇಗುಲ ಪ್ರವೇಶದ ಬಗ್ಗೆ ಕುಟುಂಬದಲ್ಲಿ ಯಾರಿಗೂ ತಿಳಿದಿರಲಿಲ್ಲ ಎಂಬುದಾಗಿ ಆಕೆಯ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದರು.