ಬದಿಯಡ್ಕ: ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ ಎಂದು ಆದೂರು ಶಾಲೆಯ ಕನ್ನಡ ಅಧ್ಯಾಪಕ, ರಾಜ್ಯ ಪ್ರಶಸ್ತಿ ವಿಜೇತ ಎನ್.ಎಸ್.ಎಸ್. ಯೋಜನಾಧಿಕಾರಿ ಶಾಹುಲ್ ಹಮೀದ್ ಅಭಿಪ್ರಾಯಪಟ್ಟರು.
ಅವರು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ತೆರೆದ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿರುವುದು ಆತಂಕಕಾರಿ ಸಂಗತಿ. ತೆರೆದ ಗ್ರಂಥಾಲಯ ಪುಸ್ತಕಗಳನ್ನು ಅಧ್ಯಯನ ಮಾಡಲು ಪ್ರೇರಣೆ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗೋವಿಂದನ್ ನಂಬೂದಿರಿ ಪುಸ್ತಕ ಓದುವುದರಿಂದ ಸಿಗುವ ಜ್ಞಾನಾರ್ಜನೆ ಯಾವುದೇ ತಂತ್ರಜ್ಞಾನದಿಂದ ಲಭಿಸಲು ಸಾಧ್ಯವಿಲ್ಲ. ಪಾಲಕರು ಶಿಕ್ಷಕರು ಓದುವ ಹವ್ಯಾಸ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನೀಡಬೇಕೆಂದರು. ಈ ಸಂದರ್ಭದಲ್ಲಿ ತೆರೆದ ಗ್ರಂಥಾಲಯ ಕಟ್ಟಲು ಶ್ರಮಿಸಿದ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು.
ಮಾನ್ಯ ಶಾಲಾ ವ್ಯವಸ್ಥಾಪಕ ನಿತ್ಯಾನಂದ, ಅಧ್ಯಾಪಕರಾದ ಸುರೇಶ್, ಕೃಷ್ಣ ಕುಮಾರಿ, ಬಾಲಕೃಷ್ಣ ಎಂ.ವಿ, ಈಶ್ವರ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಸುಮಾರು 300 ಪುಸ್ತಕಗಳನ್ನು ಸಂಗ್ರಹಿಸಿದರು. ಪ್ರಾಂಶುಪಾಲ, ಅಧ್ಯಾಪಕರು, ನಾಗರಿಕರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಸಹಕರಿಸಿದರು.