ನವದೆಹಲಿ: ಎನ್‍ಐ ಗೆ ಪ್ರಧಾನಿ ನರೇಂದ್ರ ಮೋದಿ ವರ್ಷದ ಮೊದಲ ಸಂದರ್ಶನ ನೀಡಿದ್ದು, ರಾಮ ಮಂದಿರ, 2019 ರ ಲೋಕಸಭಾ ಚುನಾವಣೆ, ರಾಫೆಲ್ ಒಪ್ಪಂದ ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇದೇ ಸಂದರ್ಶನದಲ್ಲಿ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಅವರ ರಾಜೀನಾಮೆ ವಿಷಯದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು, ಆರ್ ಬಿಐ ನ ಮಾಜಿ ಗೌರ್ನರ್ ಮೇಲೆ ಯಾವುದೇ ರೀತಿಯ ಒತ್ತಡಗಳೂ ಇರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಉರ್ಜಿತ್ ಪಟೇಲ್ ರಾಜೀನಾಮೆ ನೀಡಬೇಕೆಂದಿದ್ದರು. ಇದೇ ಮೊದಲ ಬಾರಿಗೆ ನಾನು ಈ ಮಾಹಿತಿಯನ್ನು ಬಹಿರಂಗಪಡಿಸುತ್ತಿದ್ದೇನೆ "ಉರ್ಜಿತ್ ರಾಜೀನಾಮೆ ನೀಡುವ ಬಗ್ಗೆ ನನಗೆ ವೈಯಕ್ತಿಕ ಪತ್ರ ಬರೆದು 6-7 ತಿಂಗಳ ಹಿಂದೆಯೇ ಹೇಳಿಕೊಂಡಿದ್ದರು, ಅದನ್ನು ಡಿಸೆಂಬರ್ ನಲ್ಲಿ ಲಿಖಿತ ರೂಪದಲ್ಲಿ ನೀಡಿದರು ಎಂದು ಮೋದಿ ತಿಳಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಕೆಲಸವನ್ನು ಮುಂದುವರೆಸುತ್ತೇವೆ, ಆದರೆ ಆ ರಾಷ್ಟ್ರ ಬೇಗ ಬದಲಾವಣೆಯಾಗುತ್ತದೆ ಎಂದು ನಿರೀಕ್ಷಿಸುವುದು ಬಹುದೊಡ್ಡ ತಪ್ಪು ಎಂದು ಮೋದಿ ಹೇಳಿದ್ದಾರೆ.
ನ್ಯಾಯಾಂಗ ಮತ್ತು ಸಿಬಿಐ:
ಬಿಜೆಪಿ ನ್ಯಾಯಾಂಗ ಮತ್ತು ಸಿಬಿಐ ನಂತಹ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡುವುದಕ್ಕೆ ಕಾಂಗ್ರೆಸ್ ಗೆ ಯಾವುದೇ ಹಕ್ಕಿಲ್ಲ. ಪ್ರಧಾನಿ ಹಾಗೂ ಪ್ರಧಾನಿ ಕಚೇರಿಯ ನಿಲುವಿಗೆ ವಿರುದ್ಧವಾಗಿ ರಾಷ್ಟ್ರೀಯ ಸಲಹಾ ಮಂಡಳಿಯನ್ನು ಸ್ಥಾಪನೆ ಮಾಡಲಾಗಿತ್ತು, ಕಾಂಗ್ರೆಸ್ ನ ಅವಧಿಯಲ್ಲಿ ನಡೆದ ಈ ಘಟನೆ, ಯಾವ ರೀತಿಯಲ್ಲಿ ಪ್ರಧಾನಿ ಕಚೇರಿಯ ಸಬಲೀಕರಣದ ಕ್ರಮವಾಗಿತ್ತು? ಸಚಿವ ಸಂಪುಟ ಒಂದು ದೊಡ್ಡ ನಿರ್ಣಯವನ್ನು ಕೈಗೊಳ್ಳುತ್ತದೆ. ಆದರೆ ದೊಡ್ದ ನಾಯಕನೋರ್ವ ಸಂಪುಟದ ನಿರ್ಣಯವನ್ನೇ ಸುದ್ದಿಗೋಷ್ಠಿಯಲ್ಲಿ ಹರಿದುಹಾಕುತ್ತಾರೆ. ಇದು ಸಂಸ್ಥೆಗಳಿಗೆ ನೀಡಲಾಗುವ ಯಾವ ರೀತಿಯ ಗೌರವ ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ.
ನ್ಯಾಯಾಂಗದ ವಿಷಯದಲ್ಲಿ "ಸಿದ್ಧಾಂತದ ಆಧಾರದಲ್ಲಿ ನ್ಯಾಯಾಧೀಶರು ಯಾರಾಗಬೇಕೆಂಬುದನ್ನು ನಿರ್ಧರಿಸುತ್ತೇವೆ, ಈ ಪ್ರಕಾರದಲ್ಲಿ ಹಿರಿಯರಿಗೆ ಗೇಟ್ ಪಾಸ್ ನ್ನೂ ನೀಡುತ್ತೇವೆ, ಕಿರಿಯರಿಗೆ ಬಡ್ತಿಯನ್ನೂ ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿರುವ ಸಂಸ್ಥೆಗಳು ಇದೇನಾ? ಎಂದು ಕೇಳಿರುವ ಪ್ರಧಾನಿ, ಬಿಜೆಪಿ ಈ ಸಂಸ್ಥೆಗಳ ಅತ್ಯಂತ ಶ್ರೇಷ್ಠ ಸಂಸ್ಥೆಗಳನ್ನಾಗಿ ನೋಡುತ್ತದೆ ಎಂದಿದ್ದಾರೆ.