ಮುಳ್ಳೇರಿಯ: 'ಚಿಕ್ಕ ಮಕ್ಕಳಿಗೆ ವಿಚಾರಪೂರ್ಣ ಪುಸ್ತಕಗಳನ್ನು ನೀಡುವ ಮೂಲಕ ಅವರಲ್ಲಿ ಪುಸ್ತಕ ಜಾಗೃತಿ ಮೂಡಿಸಬೇಕು. ಪೌರಾಣಿಕ ಹಾಗೂ ಐತಿಹಾಸಿಕವಾದ ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ ಸ್ವಯಂ ಚಿಂತನೆಯ ಮನೋಭಾವವನ್ನು ಹೆಚ್ಚಿಸಬೇಕು ' ಎಂದು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕøತ ಪ್ರಾಧ್ಯಾಪಕ ಡಾ. ಶ್ರೀಶಕುಮಾರ್ ಹೇಳಿದರು.
ಅವರು ಇತ್ತೀಚೆಗೆ ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ನೂತನ ಶಿಶುಮಂದಿರ ಕಟ್ಟಡ ಲೋಕಾರ್ಪಣೆ ಹಾಗೂ ಮೇಧಾ ಸರಸ್ವತಿ ಯಾಗದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
'ಮಕ್ಕಳನ್ನು ಐದು ವರ್ಷದ ತನಕ ಮುದ್ದಿನಿಂದ ಬೆಳೆಸಿ, ನಂತರ ಹತ್ತು ವರ್ಷದ ತನಕ ತಿದ್ದಬೇಕು. ನಂತರ ಮಕ್ಕಳನ್ನು ಗೆಳೆಯರಂತೆ ಬೆಳೆಸಬೇಕು. ಈ ಸಂದರ್ಭದಲ್ಲಿ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಕಬ್ಬು ಪ್ರಕೃತಿಯಾದರೆ, ಅದರಿಂದ ತಯಾರಾಗುವ ಬೆಲ್ಲವು ಸಂಸ್ಕøತಿಯಾಗಿದೆ. ವಿವಿಧ ರಾಸಾಯನಿಕಗಳನ್ನು ಸೇರಿಸಿ ತಯಾರಿಸುವ ಸಕ್ಕರೆ ವಿಕೃತಿಯಾಗಿದೆ. ಮಕ್ಕಳನ್ನು ಆರೋಗ್ಯಪೂರ್ಣವಾಗಿ ಬೆಳೆಸುವಲ್ಲಿ ಪೋಷಕರು ಹೆಚ್ಚು ಮುತುವರ್ಜಿ ವಹಿಸಬೇಕು' ಎಂದು ಅವರು ಹೇಳಿದರು.
ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ ವೆಂಕಟ್ರಾಜ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಶುಮಂದಿರದಲ್ಲಿ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಮೊದಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದುವು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾನಿಕೇತನ್ ಜಿಲ್ಲಾ ಅಧ್ಯಕ್ಷ ಶಿವಶಂಕರನ್, ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಕೆ ರಂಗನಾಥ ಶಣೈ, ಉಪ್ಪಿನಂಗಡಿ ಶ್ರೀರಾಮ ಪೌಢಶಾಲೆಯ ಸಂಚಾಲಕ ಯು ಜಿ ರಾಧ, ಪಿ ರಾಮಚಂದ್ರ ಸುಳ್ಯ ಭಾಗವಹಿಸಿದ್ದರು. ಯಾಗ ಸಮಿತಿ ಅಧ್ಯಕ್ಷ ಕಾಂತಡ್ಕ ಗಂಗಾಧರ ರಾವ್ ಸ್ವಾಗತಿಸಿದರು. ಯಾಗ ಸಮಿತಿ ಜತೆ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಳ್ಳಕ್ಕಾನ ವಂದಿಸಿದರು. ನಂತರ ಮೇಧಾ ಸರಸ್ವತಿ ಯಾಗದ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ನಂತರ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಹಿತೈಷಿಗಳಿಂದ ಗಾನ-ನೃತ್ಯ ಸಂಗಮ ನಡೆಯಿತು. ನೂರಾರು ಮಂದಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.