ನವದೆಹಲಿ: ಲೋಕಸಭೆ ಚುನಾವಣೆ ಘೊಷಣೆಯಾಗುವುದಕ್ಕೆ ಮೊದಲು ಕಾಂಗ್ರೆಸ್ ಪಕ್ಷದ ವರಿಷ್ಠರು ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ತಳೆದಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಎಐಎಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಇಂದು ನೇಮಕ ಮಾಡಿದ್ದು, ಉತ್ತರ ಪ್ರದೇಶ ಪೂರ್ವ ವಿಭಾಗದ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
ಇದರೊಂದಿಗೆ ಪ್ರಿಯಾಂಕಾಗೆ ಇದೇ ಮೊದಲ ಬಾರಿಗೆ ಪಕ್ಷದಲ್ಲಿ ಅಧಿಕೃತ ಹುದ್ದೆಯೊಂದನ್ನು ನೀಡಲಾಗಿದೆ.
ಪೂರ್ವ ವಿಭಾಗದ ಉಸ್ತುವಾರಿ ನೋಡಿಕೊಳ್ಳುವ ಹೊಣೆ ಹೊತ್ತ ಪ್ರಿಯಾಂಕಾ ಪ್ರಧಾನಿ ಮೋದಿ ಕ್ಷೇತ್ರವಾದ ವಾರಣಾಸಿಯಲ್ಲಿ ಸಹ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಕೆಸಿ ವೇಣುಗೋಪಾಲ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ ಜೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಕಾಂಗ್ರೆಸ್ ಪ್ರಧಾನ ಉಸ್ತುವಾರಿ ಕಾರ್ಯದರ್ಶಯನ್ನಾಗಿಯೂ ಗುಲಾಂ ನಬಿ ಆಜಾದ್ ಅವರನ್ನು ಹರಿಯಾಣದ ಉಸ್ತುವಾರಿಯನ್ನಾಗಿಯೂ ನೇಮಕ ಮಾಡಲಾಗಿದೆ.