ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಸರಗೋಡು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಡಂಬಳ ಇದರ ಸಂಯುಕ್ತಾಶ್ರಯದಲ್ಲಿ ಒಕ್ಕೂಟ ಪದಗ್ರಹಣ ಸಮಾರಂಭವು ಬೇಳ ಕಡಂಬಳ ಸರಕಾರಿ ಅಭಿವೃದ್ದಿ ಕಿರಿಯ ಪ್ರಾಥಮಿಕ (ಜಿ.ಡಬ್ಲ್ಯು.ಎಲ್.ಪಿ.) ಶಾಲೆಯಲ್ಲಿ ಭಾನುವಾರ ನಡೆಯಿತು.
ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಸರಗೋಡು ವಲಯ ಮೇಲ್ವಿಚಾರಕಿ ಮಧುರಾ ವಸಂತ್ ಮಾತನಾಡುತ್ತಾ ಜೀವನದ ಪಾಠವನ್ನು ಕಲಿಸಿಕೊಡುವಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ತರವಾಗಿದೆ. ಸಂಪೂರ್ಣ ಸುರಕ್ಷೆ, ಆರೋಗ್ಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಊರಿನ ಪ್ರಗತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಗಳು ಪ್ರಧಾನ ಪಾತ್ರ ವಹಿಸಿದೆ ಎಂದರು.
ಬೇಳ ಕಡಂಬಳ ಜಿ.ಡಬ್ಲ್ಯು.ಎಲ್.ಪಿ.ಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಸ್ವಸಹಾಯ ಸಂಘಗಳು ಒಗ್ಗಟ್ಟಿನಿಂದ ನಾವೆಲ್ಲಾ ಒಂದು ಎಂಬುದನ್ನು ತೋರ್ಪಡಿಸಿ ಉತ್ತಮ ಕೆಲಸಗಳನ್ನು ಕೈಗೊಳ್ಳುತ್ತಿದೆ. ಶಿಸ್ತುಬದ್ಧ ಜೀವನವು ಸದಾ ಗೆಲುವನ್ನು ತಂದುಕೊಡುತ್ತದೆ ಎಂದರು.
ನೆಹರೂ ಯುವಕೇಂದ್ರ ಸುಕುಮಾರ ಕುದ್ರೆಪ್ಪಾಡಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭಾರತೀಯ ಸಂಸ್ಕøತಿಗನುಗುಣವಾಗಿ ವಿವಿಧ ಯೋಜನೆಗಳ ಮೂಲಕ ಮಹಿಳೆಯರನ್ನು ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಸಂಘಟನೆ ಕಾರಣವಾಗಿದೆ. ಸಂಘಟನೆಗಳ ಮೂಲಕ ಊರು ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.
ಜನಜಾಗೃತಿ ವೇದಿಕೆಯ ಬದಿಯಡ್ಕ ವಲಯ ಸದಸ್ಯ ಶ್ಯಾಮ ಆಳ್ವ ಕಡಾರು ಮಾತನಾಡುತ್ತಾ ಮಹಿಳೆಯರು ಸಬಲರಾಗಿರುವುದಲ್ಲದೆ, ಇಂದು ವ್ಯಾವಹಾರಿಕವಾಗಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಒಕ್ಕೂಟದ ಮೂಲಕ ಕುಟುಂಬವು ಉತ್ತಮ ದಿಕ್ಕಿನತ್ತ ಸಾಗುತ್ತಿದೆ. ಕೆಟ್ಟ ವಿಚಾರಗಳಿಂದ ಒಳ್ಳೆಯ ವಿಚಾರಗಳತ್ತ ಜನರು ಮನಮಾಡಿರುವುದು ಸಂತಸದ ವಿಚಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ನಿತಿನ್ ಸದಸ್ಯರಿಗೆ ಕಡಿಮೆ ದರದಲ್ಲಿ ನೀಡುವ ಸೋಲಾರ್ ಪ್ಯಾನೆಲ್ ಅನ್ನು ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಅನಿತಾ ವರದಿ ಮಂಡಿಸಿದರು. ನಿಕಟಪೂರ್ವ ಅಧ್ಯಕ್ಷೆ ವಿಜಯಲಕ್ಷ್ಮೀ ಸ್ವಾಗತಿಸಿ, ಒಕ್ಕೂಟದ ಪದಾಧಿಕಾರಿ ರತ್ನಾವತಿ ಧನ್ಯವಾದವನ್ನಿತ್ತರು. ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ ನಿರೂಪಿಸಿದರು.