ಬದಿಯಡ್ಕ: ಬದಿಯಡ್ಕ ಆಸುಪಾಸಿನಲ್ಲಿ ಜಾನುವಾರು ಕಳ್ಳತನ ಮತ್ತೆ ನಡೆಯುತ್ತಿದ್ದು ನಾಗರಿಕರು ಆತಂಕಿತರಾಗಿದ್ದಾರೆ. ಏತಡ್ಕ ಸಮೀಪದ ಪುತ್ರಕಳ, ಚಾಲಕ್ಕೋಡು ತೋಟಗಾರಿಕಾ ಪರಿಸರದಿಂದ ಹಗಲಿನ ಹೊತ್ತಿನಲ್ಲೇ ಕಳ್ಳತನ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕರ್ನಾಟಕ ನೊಂದಾಯಿತ ಮೂರು ವಾಹನಗಳಲ್ಲಿ ಆಗಮಿಸಿದ ತಂಡ ಒಟ್ಟು ನಾಲ್ಕು ಜಾನುವಾರುಗಳನ್ನು ಒಯ್ದಿದ್ದಾರೆ ಎಂದು ತಿಳಿದುಬಂದಿದೆ. ಚಾಲಕ್ಕೋಡು, ಪುತ್ರಕಳ ಭಾಗದಲ್ಲಿ ರಸ್ತೆಬದಿಯಲ್ಲಿಯೇ ತೋಟಗಾರಿಕಾ ಇಲಾಖೆಯ ಸ್ಥಳವಿದೆ. ಹುಲ್ಲು ಬೆಳೆಯುವ ಈ ಪ್ರದೇಶದಲ್ಲಿ ಜಾನುವಾರುಗಳು ಮೇಯಲು ಆಗಮಿಸುತ್ತಿವೆ. ಒಂದೇ ಕಡೆಯಲ್ಲಿ ಇವು ಸಿಗುವುದರಿಂದ ಕಳ್ಳರಿಗೆ ವರದಾನವಾಗಿದೆ. ಕಳೆದ ಒಂದು ವರ್ಷದಿಂದ ಈ ಪರಿಸರದಿಂದ 50ಕ್ಕೂ ಹೆಚ್ಚು ಜಾನುವಾರುಗಳು ಕಳವಿಗೀಡಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ. ಕದ್ದ ಜಾನುವಾರುಗಳನ್ನು ಕೂಡಲೇ ಕರ್ನಾಟಕ ಭಾಗಕ್ಕೆ ಕೊಂಡೊಯ್ಯುತ್ತಿದ್ದು, ಮರುದಿನ ಇತರ ಜಾನುವಾರುಗಳನ್ನು ಕೇರಳಕ್ಕೆ ತರಲಾಗುತ್ತದೆ. ಈ ತಂಡಕ್ಕೆ ಜಾನುವಾರುಗಳ ಬಗ್ಗೆ ಮಾಹಿತಿ ನೀಡುವ ತಂಡವಿದೆ ಎನ್ನಲಾಗುತ್ತಿದೆ.
ಬದಿಯಡ್ಕ ಠಾಣೆ ವ್ಯಾಪ್ತಿಯ ಬೇಳ, ಕಡಂಬಳ, ನೀರ್ಚಾಲು ಭಾಗಗಳ ಜಾನುವಾರು ಕಳ್ಳತನ ಪ್ರಕರಣವನ್ನು ಬದಿಯಡ್ಕ ಪೊಲೀಸರು ಇತ್ತೀಚೆಗೆ ಬೇಧಿಸಿದ್ದರು. ಈ ಘಟನೆಯಲ್ಲಿ ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಲಾಗಿದ್ದು ಇನ್ನೋರ್ವ ತಲೆ ಮರೆಸಿಕೊಂಡಿದ್ದಾನೆ. ಕಳೆದ ಆರು ತಿಂಗಳಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳನ್ನು ಕದ್ದ ತಂಡ ಇದಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಜಾನುವಾರು ಕಳವು ನಡೆಸಿ ನಂತರ ಮಾರಾಟ ಮಾಡುತ್ತಾರೆ.
ಆದೂರು ಠಾಣೆ ವ್ಯಾಪ್ತಿಯ ಆದೂರು, ಅಡೂರು ಭಾಗಗಳಲ್ಲಿಯೂ ಜಾನುವಾರು ಕಳವು ವ್ಯಾಪಕವಾಗಿದೆ ಎಂದು ತಿಳಿದು ಬಂದಿದೆ. ಗುಡ್ಡೆಗೆ ಮೇಯಲು ಬಿಡುವ ಜಾನುವಾರುಗಳನ್ನು ಹಾಡಹಗಲೇ ಕದ್ದೊಯ್ಯುವ ತಂಡ ಈ ಪರಿಸರದಲ್ಲಿ ಸಕ್ರಿಯವಾಗಿದೆ. ಬದಿಯಡ್ಕ ಠಾಣೆ ವ್ಯಾಪ್ತಿಯ ಮೂಕಂಪಾರೆಯಲ್ಲಿ ಒಂದು ತಿಂಗಳಲ್ಲಿ 13 ಜಾನುವಾರುಗಳು ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಇದೇವೇಳೆ ಚಾಲಕ್ಕೋಡು, ಪುತ್ರಕಳ ಭಾಗದಿಂದ ಜಾನುವಾರು ಕಳವುಗೀಡಾದ ಬಗ್ಗೆ ಯಾವುದೇ ದೂರು ಲಭಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.