ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಾಲಯದವಾರ್ಷಿಕ ಜಾತ್ರಾ ಮಹೋತ್ಸವದ ಪ್ರಧಾನ ಆಕರ್ಷಣೆಯಾದ ಇತಿಹಾಸ ಪ್ರಸಿದ್ದ ಕುಂಬಳೆ ಬೆಡಿಯನ್ನು(ಸಿಡಿಮದ್ದು ಪ್ರದರ್ಶನ) ತಡೆಯಲು ಕಾಣದ ಕೈಗಳು ಹುನ್ನಾರ ನಡೆಸಿದೆ ಎಂದು ಬಿಜೆಪಿ ಆರೋಪಿಸಿದೆ.
ವಷರ್ಂಪ್ರತಿ ಜ.17 ರಂದು ರಾತ್ರಿ 10.30 ರ ಬಳಿಕ ನಡೆಸುತ್ತಿದ್ದ ಸಿಡಿಮದ್ದು ಪ್ರದರ್ಶನ 9 ಗಂಟೆಗೆ ನಡೆಸಬೇಕೆಂದು ಕಡ್ಡಾಯವಾಗಿ ಒತ್ತಡ ಹೇರಿ ಕಂದಾಯ ಅಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠರು,ಸಹಾಯಕ ಅಧಿಕಾರಿಗಳು, ಕುಂಬಳೆ ಠಾಣಾಧಿಕಾರಿಗಳೇ ಮೊದಲಾದವರ ತಂಡ ಕಣಿಪುರದ ಕ್ಷೇತ್ರದ ಪ್ರಬಂಧಕರಿಗೆ ನೋಟೀಸು ಜಾರಿಮಾಡಿದ್ದರು. ಸಿ.ಪಿ.ಎಂ ಪಕ್ಷದ ಒತ್ತಾಸೆಗೊಳಗಾಗಿ ಪೊಲೀಸರು ಈ ರೀತಿ ಮಾಡಿರುವುದಾಗಿ ಬಿ.ಜೆ.ಪಿ ಆರೋಪಿಸಿದೆ.
ಸಿ.ಪಿ.ಎಂ ಪಕ್ಷದ ಬಲವಂತಕ್ಕೆ ಪೊಲೀಸ್ ಇಲಾಖೆ ಕೈಜೋಡಿಸಿ ಸ್ವಾಮಿ ಕಾರ್ಯಕ್ಕೆ ಮುಂದಾಯಿತೆಂದು ತಿಳಿದು ಬಂದಿದೆ. ರಾತ್ರಿ 9 ಕ್ಕೂ ಮೊದಲು ಸಿಡಿಮದ್ದು ಪ್ರದರ್ಶನ ನಡೆಸಬೇಕೆಂದು ಹೆಚ್ಚುವರಿ ಪೋಲೀಸ್ ವರಿಷ್ಠರು ಸ್ಥಳದಲ್ಲಿ ಹಠ ಹಿಡಿದು ಠಿಕಾಣಿ ಹೂಡಿದ್ದು ಈ ರೀತಿಯ ಧೋರಣೆಯಿಂದ ಹಲವಾರು ಸಿಡಿಮದ್ದುಗಳನ್ನು ಹಿಂದಕ್ಕೆ ಕಳುಹಿಸಲಾಯಿತು. ಇದು ಭಕ್ತರಿಗೆಲ್ಲ ನೋವುಂಟು ಮಾಡುವ ಕ್ರಮವಾಗಿದೆ. ರಾತ್ರಿ 11.30 ಗಂಟೆಗೆ ಸಿಡಿಮದ್ದು ಪ್ರದರ್ಶನವನ್ನು ತಡೆಹಿಡಿದ ಪೋಲೀಸರು ಬಳಿಕ ವೇದಿಕೆಗೆ ತೆರಳಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದು ಯಾವ ರೀತಿಯ ಧೋರಣೆ ಎಂದು ಪೋಲೀಸ್ ಇಲಾಖೆ ಸ್ಫಷ್ಪಪಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಶಬರಿಮಲೆಯಲ್ಲಿ ನಡೆದ ರೀತಿಯಲ್ಲಿ ಭಕ್ತರಿಗೆದುರಾಗಿ ಸುಳ್ಳು ಪ್ರಚಾರ ಮಾಡುವ ಎಲ್‍ಡಿಎಫ್‍ನ ಕಾರಸ್ಥಾನ ಕಣಿಪುರ ಬೆಡಿ ಉತ್ಸವದ ಹಿಂದೆ ನಿಚ್ಚಳವಾಗಿ ಇದೆ.ಭಕ್ತರ ಭಾವನೆಗಳನ್ನು ಕಾನೂನಿನ ಹೆಸರಲ್ಲಿ ನಿಯಂತ್ರಿಸಿ ನಂಬಿಕೆಗೆ ದ್ರೋಹವೆಸಗುವ ಸಿಪಿಎಂ ನ ತಂತ್ರಗಾರಿಕೆಗೆ ಜನರು ತಕ್ಕ ಉತ್ತರ ನೀಡುವರು ಎಂದು ಬಿ.ಜೆ.ಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಈ ಸಂಬಂಧ ಕುಂಬಳೆಯಲ್ಲಿರುವ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆದ ತುರ್ತು ಸಭೆಯಲ್ಲಿ ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಢಾರಿ, ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ , ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್, ಜಿಲ್ಲಾ ಉಪಾಧ್ಯಕ್ಷ ಸತ್ಯಶಂಕರ ಭಟ್, ಮಂಡಲ ಉಪಾದ್ಯಕ್ಷ ವಿನೋದ್ ಕಡಪ್ಪುರ, ಇತರ ಹಿಂದುಳಿದ ವರ್ಗ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಶಶಿ ಕುಂಬ್ಲೆ , ಮಂಡಲ ಕಾರ್ಯದರ್ಶಿ ಮಣಿಕಂಠ ರೈ ಪಟ್ಲ ,ಹಿಂದುಳಿದ ವರ್ಗ/ವಿಭಾಗ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎ.ಕೆ ಕಯ್ಯಾರ್ ಉಪಸ್ಥಿತರಿದ್ದರು. ಬಿ.ಜೆ.ಪಿ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ. ಸ್ವಾಗತಿಸಿ ಮಂದಿಸಿದರು.