ತೆಂಗು ವಂಶವಾಹಿಯನ್ನು ಗುರುತಿಸಿ ಸಂಗ್ರಹಿಸುವ ಕಾರ್ಯದಲ್ಲಿ ಸಂಸ್ಥೆ ಮತ್ತು ದೇಶಕ್ಕೆ ಕೀರ್ತಿ ತಂದ ನಿರ್ದೇಶಕ
ಕಾಸರಗೋಡು: ಕಳೆದ ನಾಲ್ಕೂವರೆ ವರ್ಷಗಳಿಂದ ಐಸಿಎಆರ್- ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಸಿಪಿಸಿಆರ್‍ಐ)ಯ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಡಾ.ಪಿ ಚೌಡಪ್ಪ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಇಂದು ಅವರ ವೃತ್ತಿ ಸೇವೆಯ ಕೊನೆ ದಿನವಾಗಿದೆ.
1985 ರಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸಿಪಿಸಿಆರ್‍ಐಗೆ ಕಾಲಿಟ್ಟ ಡಾ.ಪಿ ಚೌಡಪ್ಪ ಬಳಿಕ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಸ್ಥೆಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2014 ಸೆಪ್ಟೆಂಬರ್ ತಿಂಗಳಲ್ಲಿ ಸಿಪಿಸಿಆರ್‍ಐ ನಿರ್ದೇಶಕರಾಗಿ ನೇಮಕವಾಗಿದ್ದರು. ದಕ್ಷಿಣ ಭಾರತದಲ್ಲಿ ತೆಂಗು ಬೆಳೆಗೆ ಪೂರಕ ಪ್ರೋತ್ಸಾಹ ನೀಡಿದ್ದ ಡಾ.ಪಿ ಚೌಡಪ್ಪ ಕೇರಳ ಸಹಿತ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ತೆಂಗಿನ ನೀರಾ ಯೋಜನೆಯನ್ನು ಜ್ಯಾರಿಗೊಳಿಸಲು ಸಹಕರಿಸಿ, ತೆಂಗು ಬೆಳೆಗಾರರ ಆರ್ಥಿಕತೆಗೆ ಹೊಸ ಆಯಾಮ ನೀಡಿದ್ದರು. ಡಾ.ಪಿ ಚೌಡಪ್ಪ ನಿರ್ದೇಶಕರಾಗಿದ್ದ ಸಂದರ್ಭ ಸಿಪಿಸಿಆರ್‍ಐ ಸಂಸ್ಥೆಯು ಹಲವು ಕೃಷಿ-ವಿಜ್ಞಾನಿಗಳ ಮುಖಾಮುಖಿ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ದೇಶದ ಹಲವು ರಾಜ್ಯಗಳ ಪ್ರಮುಖ ನಗರಗಳು ಸೇರಿದಂತೆ ಕಾಸರಗೋಡು, ಕಾಯಂಕುಳಂ, ವಿಟ್ಲ, ಕಿದು, ಕಹಿಕುಚಿ ಮೋಹಿತ್ ನಗರಗಳಲ್ಲಿ ಮೆಗಾ ಕಿಸಾನ್ ಮೇಳಗಳನ್ನು ಆಯೋಜಿಸಿ ಸಫಲರಾಗಿದ್ದರು. ಕೇರಳ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಇತ್ತೀಚೆಗೆ ವೈಗಾ ಕೃಷಿ ಉನ್ನತಿ ಮೇಳವನ್ನು ತ್ರಿಶೂರಿನಲ್ಲಿ ಆಯೋಜಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಸಿಪಿಸಿಆರ್‍ಐ ಶತಮಾನೋತ್ಸವದ ಸಂದರ್ಭ 100 ತೆಂಗಿನ ಸಸಿಗಳನ್ನು 100 ಮಂದಿ ಕೃಷಿಕರ ಸಹಾಯದೊಂದಿಗೆ 18 ವಿವಿಧ ರಾಜ್ಯಗಳಲ್ಲಿ ಒಂದೇ ಸಮಯಕ್ಕೆ ನಿಮಿಷದೊಳಗೆ ನೆಟ್ಟು ಗಿನ್ನೆಸ್ ದಾಖಲೆ ನಿರ್ಮಿಸಿರುವುದರಲ್ಲಿ ಚೌಡಪ್ಪರವರ ಮಹತ್ತರ ಪಾತ್ರವಿದೆ. ಶತಮಾನೋತ್ಸವ ಸಂದರ್ಭ ಸಿಪಿಸಿಆರ್‍ಐ ಸೇವೆಯನ್ನು ಪರಿಗಣಿಸಿದ ಭಾರತ ಸರಕಾರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತು. ಡಾ.ಚೌಡಪ್ಪರವರ ಮುಂದಾಳುತ್ವದಲ್ಲಿ ತೆಂಗಿನ ವೈಜ್ಞಾನಿಕ ತದ್ರೂಪಿ ಸೃಷ್ಠಿ, ಮೌಲ್ಯಾಧಾರಿತ ಉತ್ಪನ್ನಗಳಾದ ತೆಂಗಿನ ಐಸ್‍ಕ್ರೀಂ, ಖಾದ್ಯ ವಸ್ತುಗಳ ತಯಾರಿಗೂ ಪ್ರೋತ್ಸಾಹ ಲಭಿಸಿತ್ತು. ಸಿಪಿಸಿಆರ್‍ಐ ಮೂಲಕ ತೆಂಗು ಮತ್ತು ಅಡಿಕೆಗೆ ಜೌಷಧ ಸಿಂಪಡಿಸುವ ವಿಶೇಷ ಏರ್ ಬ್ಲಾಸ್ಟ್ ಸ್ಪ್ರೇಯರ್ ತಯಾರಿ, ಮಿನಿ ಟ್ರಾಕ್ಟರ್ ನಿರ್ಮಾಣವು ನಡೆದಿದೆ. ಸಿಪಿಸಿಆರ್‍ಐ ಸಂಸ್ಥೆಯ ಆಧುನಿಕ ವೈಜ್ಞಾನಿಕ ತಳಹದಿಗೆ ಅಡಿಪಾಯ ಹಾಕಿದ ಸಂಸ್ಥೆ ನಿರ್ದೇಶಕ ಡಾ.ಚೌಡಪ್ಪ ಅವರು ತೆಂಗಿನ ವಂಶವಾಹಿ ಗುರುತಿಸಿ ವರದಿ ಸಂಗ್ರಹಿಸುವ ಮೂಲಕ ಭಾರತವನ್ನು ವಿಶ್ವದ ಪ್ರಮುಖ ತೆಂಗು ಉತ್ಪಾದನಾ ರಾಷ್ಟ್ರದ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೇರಿಸಿದ್ದಾರೆ.