ಕುಂಬಳೆ: ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳ ನಿತ್ಯ ಬಳಕೆಯ ಕುಡಿಯುವ ನೀರು ಘಟಕವನ್ನು ಖಾಸಗೀ ವ್ಯಕ್ತಿಯೊಬ್ಬರು ವಶಪಡಿಸಿ ಕಾಲನಿ ನಿವಾಸಿಗಳಿಗೆ ನಿತ್ಯ ಬಳಕೆಗೆ ನೀರು ಲಭ್ಯವಾಗದೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.
ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಧರ್ಮತ್ತಡ್ಕ ಕಕ್ವೆ ಪ.ಜಾತಿ ಕಾಲನಿಯಲ್ಲಿ 2014ರಲ್ಲಿ ಅಮದಿನ ಜಿಲ್ಲಾ ಪಂಚಾಯತಿ ಪ.ಜಾತಿ ಯೋಜನೆಯ ಅನ್ವಯ ಕೊಳವೆ ಬಾವಿಯೊಂದನ್ನು ನಿರ್ಮಿಸಲಾಗಿತ್ತು. ಕಾಲನಿ ಪರಿಸರದಲ್ಲಿ ಕೊಳವೆ ಬಾವಿಗೆ ಯೋಗ್ಯ ಸ್ಥಳ ಲಭ್ಯವಾಗದ್ದರಿಂದ ಅದೇ ಪರಿಸರದ ಖಾಸಗೀ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ವ್ಯಕ್ತಿಯ ಅನುಮತಿಯೊಂದಿಗೆ ಸಂಬಂಧಪಟ್ಟ ಇಲಾಖೆಯವರು ಕೊಳವೆ ಬಾವಿ ನಿರ್ಮಿಸಿದ್ದರು. ಆದರೆ ಇದೀಗ ಕಳೆದ ಒಂದು ತಿಂಗಳಿಂದ ಖಾಸಗೀ ವ್ಯಕ್ತಿಯು ಕಾಲನಿ ನಿವಾಸಿಗಳಲ್ಲಿ ನೀರು ಪಡೆದುಕೊಳ್ಳದಂತೆ ತಿಳಿಸಿ, ಬೇಕಿದ್ದರೆ ನಿಮ್ಮ ಕೊಳವೆ ಬಾವಿ, ಪಂಪ್‍ಸೆಟ್, ಪೈಪ್ ಗಳನ್ನು ಬೇಕಿದ್ದಲ್ಲಿಗೆ ಒಯ್ಯಿರಿ ಎಂದು ಬೆದರಿಕೆ ಹಾಕಿರುವುದಾಗಿ ಕಾಲನಿ ನಿವಾಸಿಗಳು ಗುರುವಾರ ಸಂಜೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿರುವರು. ಇದರಿಂದ ನಿತ್ಯ ಬಳಕೆಗೆ ನೀರಿಲ್ಲದೆ ಟ್ಯಾಂಕರ್ ಗಳ ಮೂಲಕ ದುಬಾರಿ ಹಣ ತೆತ್ತು ನೀರು ಪಡೆಯುವ ದುರ್ವಿಧಿ ಎದುರಾಗಿದೆ ಎಂದು ಕಾಲನಿ ನಿವಾಸಿಗಳು ಸುದ್ದಿಗೋಷ್ಠಿಯಲ್ಲಿ ಅವಲತ್ತುಕೊಂಡರು. ಟ್ಯಾಂಕರೊಂದರ ನೀರಿಗೆ 650 ರೂ. ಪಾವತಿಸಬೇಕಾಗಿದೆ.ಕೂಲಿಕಾಳು ಮಾಡಿ ಜೀವನ ಸಾಗಿಸುವ ಕಾಲನಿಯ ಮೂವತ್ತಕ್ಕಿಂತಲೂ ಅಧಿಕ ಕುಟುಂಬಗಳಿಗೆ ಇದು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಸಮಸ್ಯೆಗೆ ಬಗ್ಗೆ ಈಗಾಗಲೇ ಗ್ರಾ.ಪಂ. ಅಧಿಕೃತರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಗ್ರಾ.ಪಂ. ಸದಸ್ಯರಿಗೆ ಸಮಸ್ಯೆಯ ಬಗ್ಗೆ ಸ್ಪಷ್ಟ ಅರಿವಿದ್ದರೂ ಖಾಸಗೀ ವ್ಯಕ್ತಿಯ ಕೈಗೊಂಬೆಯಂತೆ ಮೌನವಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೊಗೇರ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ರವಿಕಾಂತ ಕೇಸರಿ ಕಡಾರು, ಪಿ.ಎ.ರಮೇಶ್, ಬಿ.ಎ.ಬಶೀರ್, ಮಣಿ ಕೆ, ಸುಂದರಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.