ಬದಿಯಡ್ಕ: ಮಂಗಳವಾರ ಅಪರಾಹ್ನ ಗಡಿ ಗ್ರಾಮ ಪುತ್ರಕಳದಲ್ಲಿ ನಕ್ಸಲರ ತಂಡ ಮನೆಯೊಂದಕ್ಕೆ ಭೇಟಿ ನೀಡಿದೆಯೆಂಬ ವದಂತಿ ಒಂದಷ್ಟು ಹೊತ್ತು ಭೀತಿಗೊಳಪಡಿಸಿತು. ಈ ಸಂಬಂಧ ತೀವ್ರ ಗಲಿಬಿಲಿಗೊಳಗಾದಂತೆ ಕಂಡುಬಂದ ಪೋಲೀಸರು ಕೂಡಾ ಚುರುಕಿನೊಂದಿಗೆ ಓಡಾಡಿ, ತನಿಖೆ ತೀವ್ರಗೊಳಿಸಿದಾಗ ಅದು ಸುಳ್ಳುಸುದ್ದಿಯೆಂದು ಖಾತ್ರಿಯಾಗುವುದರೊಂದಿಗೆ ಬಿಗು ಸಡಿಲಗೊಂಡಿತು.
ಘಟನೆಯ ವಿವರ:
ಮಂಗಳವಾರ ಅಪರಾಹ್ನ ಪುತ್ರಕಳ ನಿವಾಸಿಯಾದ ವ್ಯಕ್ತಿಯೋರ್ವ ತನ್ನ ಮನೆಗೆ ನಕ್ಸಲರ ತಂಡವೊಂದು ಆಗಮಿಸಿದೆ. ತಾನು ಹೊರಗೆತೆರಳಿದ್ದವನು ಮನೆಗೆ ಮರಳಿದಾಗ ಪತ್ನಿ ಈ ಬಗ್ಗೆ ಹೇಳಿರುವಳು. ತಾನೂ ಕಂಡಿರುವೆನು ಎಂದು ಪ್ರಚುರಪಡಿಸಿದ. ವದಂತಿ ಕ್ಷಣಾರ್ಧದಲ್ಲಿ ಬದಿಯಡ್ಕ ಪೋಲೀಸರ ಕಿವಿಗೂ ಬಿದ್ದು, ವಿವರವರಿಯಲು ಪುತ್ರಕಳಕ್ಕೆ ದೌಡಾಯಿಸಿದರು. ಬಳಿಕ ನಡೆಸಿದ ತನಿಖೆಯಲ್ಲಿ ಈ ಬಗ್ಗೆ ವದಂತಿ ಹಬ್ಬಿಸಿದ ವ್ಯಕ್ತಿ ಫುಲ್ ಟೈಟ್ ಆಗಿ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುವುದು ಕಂಡುಬಂತು. ಈ ಮೂಲಕ ಅಲ್ಪಹೊತ್ತಿನ ಆತಂಕ ಕೊನೆಗೂ ಮರೆಯಾಯಿತು ಎಂದು ಪೋಲೀಸ್ ಮೂಲಗಳು ಸ್ಪಷ್ಟಪಡಿಸಿತು.