ಕುಂಬಳೆ: ದೇವರನ್ನು ಲಂಚದ ಮೂಲಕ ಒಲಿಸಲು ಸಾಧ್ಯವಿಲ್ಲ. ಕೇವಲ ಭಕ್ತಿಯಿಂದ ಪೂಜಿಸಿದಲ್ಲಿ ಮಾತ್ರ ಒಲಿಸಲು ಸಾಧ್ಯ. ಭಗವಂತನ ಆರಾಧನೆಯಲ್ಲಿ ಯಾವುದೇ ಭಯ ಆತಂಕ ಬೇಡ. ದೇವರ ಮುಂದೆ ಬಡವ ಬಲ್ಲಿದರೆಲ್ಲರೂ ಸಮಾನರೆಂದು ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಹೇಳಿದರು.
ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ದಲ್ಲಿ ಒಂದು ತಿಂಗಳ ಕಾಲ ಜರಗುತ್ತಿರುವ ಧನುಪೂಜೆಯಂಗವಾಗಿ ಶನಿವಾರ ಮುಂಜಾನೆ ಜರಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದಲ್ಲಿ ನಾವು ಮಾಡಿದ ಪಾಪ ಪುಣ್ಯಗಳು ನಮ್ಮ ಬೆನ್ನ ಹಿಂದೇಯೇ ಬರುವುದು. ಭಗವಂತನ ಆರಾಧನೆಯಿಂದ ಮೋಕ್ಷ ಪ್ರಾಪ್ತವಾಗುವುದು. ನಮ್ಮ ಧರ್ಮವನ್ನು ಶ್ರದ್ಧಾ ಭಕ್ತಿಯಿಂದ ಪಾಲಿಸುವುದರೊಂದಿಗೆ ಅನ್ಯ ಧರ್ಮವನ್ನು ಪ್ರೀತಿಸುವುದೂ ಕರ್ತವ್ಯ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್, ಪೈವಳಿಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್, ಮಂಗಳೂರು ಎಂ.ಸಿ.ಎಫ್ ಮಾನವ ಸಂಪನ್ಮೂಲ ಅಧಿಕಾರಿ ಜಯಶಂಕರ ರೈ, ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ವಲಯಾಧಿಕಾರಿ ಡಿ.ದಾಮೋದರನ್, ಕ್ಷೆತ್ರ ಸೇವಾ ಸಮಿತಿ ಅಧ್ಯಕ್ಷ ಎಂ.ಶಂಕರ ರೈ ಮಾಸ್ತರ್ ಮತ್ತು ಜೆ.ಬಿ.ಬಾಲಕೃಷ್ಣ ಭಂಡಾರಿ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಸಮಾರಂಭದಲ್ಲಿ ಹರಿಸಂಕೀರ್ತನೆ ನಡೆಸಿದ ಶ್ರದ್ಧಾ ನಾಯರ್ಪಳ್ಳ ತಂಡವನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ರಾಜೇಂದ್ರ ರೈ ಸ್ವಾಗತಿಸಿ, ಕೊರಗಪ್ಪ ಡಿ ವಂದಿಸಿದರು.