ತಿರುವನಂತಪುರ: ಸಂಘ ಪರಿವಾರದವರು ಪುಣ್ಯ ಕ್ಷೇತ್ರವಾಗಿರುವ ಶಬರಿಮಲೆಯನ್ನು ಹಿಂಸಾಚಾರ ಪ್ರದೇಶ ಮಾಡುತ್ತಿದ್ದಾರೆಂದು ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ಹೇಳಿದ್ದಾರೆ.
ಕೇರಳದ ಪ್ರಸಿದ್ಧ ಪುಣ್ಯ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸುವಂತಿಲ್ಲ ಎಂಬ 800 ವರ್ಷಗಳ ಸಂಪ್ರದಾಯವನ್ನು ಇಬ್ಬರು ಮಹಿಳೆಯಲು ಉಲ್ಲಂಘಿಸಿದ ಹಿನ್ನಲೆಯಲ್ಲಿ ಕೇರಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಹಿಳೆಯರಿಗೆ ರಕ್ಷಣೆ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಸರ್ಕಾರ ಸಂವಿಧಾನದ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ. ಸಂಘ ಪರವಾರದವರು ಶಬರಿಮಲೆಯನ್ನು ಗಲಭೆ ಪೀಡಿತ ಪ್ರದೇಶ ಮಾಡುತ್ತಿದ್ದಾರೆಂದು ಹೇಳಿದ್ದಾರೆ.
ಕೇರಳ ರಾಜ್ಯದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಈ ವರೆಗೂ 7 ಪೊಲೀಸ್ ವಾಹನಗಳು, 76 ಕೇರಳ ರಾಜ್ಯ ಬಸ್ ಗಳನ್ನು ನಾಶಪಡಿಸಿದ್ದಾರೆ. ಇದಲ್ಲದೆ, 39 ಪೊಲೀಸ್ ಸಿಬ್ಬಂದಿಗಳ ಮೇಲೆಯೂ ದಾಳಿ ನಡೆದಿದೆ. ಇದರಲ್ಲಿ ಬಹುತೇಕರು ಮಹಿಳಾ ಪೊಲೀಸರೇ ಆಗಿದ್ದಾರೆ. ಮಹಿಳಾ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿ ನಡೆದಿದೆ.
ಮಹಿಳೆಯರ ಪ್ರವೇಶ ಕುರಿತು ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ತಂತ್ರಿಗಳು, ಮುಖ್ಯ ಅರ್ಚಕರು ರಾಜಿನಾಮೆ ನೀಡಬಹುದು. ದೇಗುಲ ಮುಚ್ಚುವುದು ಅಥವಾ ಮುಚ್ಚದೇ ಇರುವುದನ್ನು ದೇವಸ್ವಂ ಮಂಡಳಿ ನಿರ್ಧರಿಸುತ್ತದೆ ಎಂದು ತಿಳಿಸಿದ್ದಾರೆ.
ನಿನ್ನೆ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ದಕ್ಕೆ ಇಂದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ, ಶಬರಿಮಲೆ ಪ್ರವೇಶಿಸಿದ್ದ ಈ ಇಬ್ಬರು ಮಹಿಳೆಯರಿಗೆ ಅಲ್ಲಿದ್ದ ಭಕ್ತರೇ ದೇಗುಲ ಪ್ರವೇಶಿಸಲು ಸಹಾಯ ಮಾಡಿದ್ದರು ಎಂದಿದ್ದಾರೆ.