ನವದೆಹಲಿ: ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಹೋರಾಟಗಾರ್ತಿ, ಹೆಸರಾಂತ ಪತ್ರಕರ್ತೆ ಅಪ್ಸರಾ ರೆಡ್ಡಿಯನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇಮಕ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ಸಮ್ಮುಖದಲ್ಲಿ ಅಪ್ಸರಾ ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅಪ್ಸರಾ ಕಾಲೇಜು ದಿನಗಳಿಂದಲೂ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದು, ತಮಿಳುನಾಡಿನಲ್ಲಿ ಮಕ್ಕಳ ಮೇಲಿನ ಅತ್ಯಾಚಾರದಂತಹ ಹೈ ಪ್ರೋಪೈಲ್ ಪ್ರಕರಣಗಳಲ್ಲಿ ಹೋರಾಟ ನಡೆಸಿದ್ದಾರೆ.
ಸಾಮಾಜಿಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಅಪ್ಸರಾ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೂ ಅಲ್ಲಿ ಮುಕ್ತ ಚಿಂತನೆಗಳಿಗೆ ಸ್ವಾತಂತ್ರ್ಯ ಇಲ್ಲ ಎಂದು ಹೇಳಿಕೆ ನೀಡಿ ಬಿಜೆಪಿ ತೊರೆದಿದ್ದರು. ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಮಹಿಳೆಯರ ಆರ್ಥಿಕ ಸಬಲೀಕರಣ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಹಾಗೂ ಮಹಿಳಾ ಕೇಂದ್ರಿತ ನೀತಿಗಳತ್ತ ಕೊಡುಗೆ ನೀಡುವುದು ತಮ್ಮ ಗುರಿ ಎಂದು ಅಪ್ಸರಾ ಹೇಳಿದ್ದಾರೆ.
ಮಾನವ ಅಭಿವೃದ್ಧಿ ವರದಿ ಪ್ರಕಾರ ದೇಶದಲ್ಲಿ ಶೇ, 40 ರಷ್ಟು ಮಹಿಳೆಯರು ಲಿಂಗ ಅಸಮಾನತೆ, ಲಿಂಗ ಅಸಮಾನತೆ, ಶೋಷಣೆ, ಕುಟುಂಬ ಸದ್ಯಸ್ಯರು ಅಥವಾ ಪತಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ. ಬಾಲಕಿಯರ ಮೇಲಿನ ಅತ್ಯಾಚಾರ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರ ಮೇಲಿನ ಅಪರಾಧ ಮತ್ತು ಶೋಷಣೆ ತಪ್ಪಿಸಲು ನಾವೆಲ್ಲಾ ಧ್ವನಿ ಎತ್ತಬೇಕಾಗಿದೆ. ಸಾಮಾಜಿಕ ನ್ಯಾಯ ಗಟ್ಟಿಗೊಳ್ಳುವ ನಿಟ್ಟಿನಲ್ಲಿ ನೀತಿ ರೂಪಿಸಬೇಕಾಗಿದೆ ಎಂದಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತರ ಮಸೂದೆ ಕುರಿತಂತೆ ಪ್ರತಿಕ್ರಿಯಿಸಿದ ಅಪ್ಸರಾ ,ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರಿಗೆ ಶಿಕ್ಷಣ ಹಾಗೂ ಸಮಾನ ಅವಕಾಶದ ಅಗತ್ಯವಿದೆ. ಈ ಸಮುದಾಯ ಮುಖ್ಯವಾಹಿನಿಗೆ ಉತ್ತಮ ಆರಂಭ ಎಂದು ಅಭಿಪ್ರಾಯಪಟ್ಟರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮುದಾಯವನ್ನು ಭೇಟಿ ಮಾಡಿ , ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುವುದು, ಬಿಜೆಪಿಯ ಪ್ಯಾಸಿಸ್ಟ್ ಧೋರಣೆ ವಿರುದ್ಧ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.