ಬದಿಯಡ್ಕ : ನೀರ್ಚಾಲು ಮಹಾಜನ ಶಿಕ್ಷಣ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಭಾನುವಾರ ಕಾಸರಗೋಡು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಮಕ್ಕಳ ಕವಿಗೋಷ್ಠಿ ಸಾಹಿತ್ಯಾಭಿಮಾನಿಗಳ ಜನಮನ ರಂಜಿಸಿತು. ಅನೇಕ ಮಂದಿ ಪುಟ್ಟಪುಟ್ಟ ಮಕ್ಕಳು ಕವನಗಳನ್ನು ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸನ್ನಿಧಿ ಟಿ ರೈ ಪೆರ್ಲ ಮಾತನಾಡಿ,'ಸಾಹಿತ್ಯದಿಂದ ನಾಗರೀಕತೆಯ ಜತೆ ಭಾವನೆಗಳ ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು. ಹಳೆಯ ಸಾಹಿತ್ಯದ ಜತೆ ಹೊಸ ಸಾಹಿತ್ಯ ಮಿಳಿತವಾದಾಗ ಸುಂದರ ಸಾಹಿತ್ಯ ಸೃಷ್ಟಿಯಾಗುತ್ತದೆ. ಭಾಷೆಗೆ ಗಡಿರೇಖೆ ಇಲ್ಲ ಎಂದು ಹೇಳಿದರು. ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಕನ್ನಡ ಹೋರಾಟವು ವಿವಿಧ ಆಯಾಮಗಳಲ್ಲಿ ಮುಂದುವರಿಯಬೇಕು. ಧರಣಿ ಹೋರಾಟಕ್ಕಿಂತ ಸಾಹಿತ್ಯ ಬರವಣಿಗೆ-ಗೋಷ್ಠಿಗಳ ಮೂಲಕ ಜಾಗೃತಿಯ ವಾತಾವರಣ ನಿರ್ಮಿಸಿ ಹೋರಾಟಕ್ಕೆ ಹೊಸ ದಿಶೆ ತೋರಿಸಲು ಸಾಧ್ಯವವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಪಿ ಶ್ರೀಕೃಷ್ಣ ಭಟ್ ಮಾತನಾಡಿ,'ಮಕ್ಕಳ ಕವಿಗೋಷ್ಠಿಯು ಕಾಸರಗೋಡು ಭರವಸೆಯ ಕುರುಹು. ಕಾಸರಗೋಡಿನ ಕನ್ನಡಿಗರು ಕ್ರಿಯಾಶೀಲರಾದಷ್ಟು, ಕನ್ನಡ ಅಳಿಯದು. ಮಕ್ಕಳ ಸಾಹಿತ್ಯ ರಚನೆಯಲ್ಲಿ ಹೆತ್ತವರು ಮಾರ್ಗದರ್ಶಕರಾಗಬೇಕು' ಎಂದು ಹೇಳಿದರು. ಕವಿಗೋಷ್ಠಿಯಲ್ಲಿ ಜಿಲ್ಲೆಯ ಬಾಲ ಕವಿಗಳಾದ ಉಪಾಸನಾ ಪಂಜರಿಕೆ, ಚಿನ್ಮಯಕೃಷ್ಣ ಕೆ, ಚಿತ್ತರಂಜನ್ ಕಡಂದೇಲು, ದೀಕ್ಷಿತ, ಪುನೀತ್ ಐ ಕೆ, ಆದ್ಯಂತ್ ಅಡೂರು, ಶ್ರದ್ಧಾ ಹೊಳ್ಳ, ದೀಕ್ಷಿತಾ ಕೆ ಭಾಗವಹಿಸಿದ್ದರು. ಶೈಲಜಾ ಟೀಚರ್ ಸ್ವಾಗತಿಸಿ, ಶಿವರಾಮ ಪಿ ವಿ ವಂದಿಸಿದರು. sವೆಂಕಟ ಭಟ್ ಎಡನೀರು ನಿರ್ವಹಿಸಿದರು.
ಬಳಿಕ ವೆಳ್ಳಿಕ್ಕೋತ್ ವಿಷ್ಣು ಭಟ್, ಯು.ಜಿ.ನಾರಾಯಣ ಶರ್ಮಾ ಹಾಗೂ ಬಾಲಸುಬ್ರಹ್ಮಣ್ಯ ಕೋಳಿಕ್ಕಜೆ ಅವರಿಂದ ಸಂಗಿತ ಸಂಭ್ರಮ ಪ್ರಸ್ತುತಗೊಂಡಿತು. ಹಿಮ್ಮೇಳದಲ್ಲಿ ಎಲ್ ಅನಂತಪದ್ಮನಾಭ(ವಯಲಿನ್), ಶ್ರೀಧರ ರೈ ಕಾಸರಗೋಡು(ಮೃದಂಗ|) ಸಹಕರಿಸಿದರು. ಬಿ ಬಾಲಕೃಷ್ಣ ಅಗ್ಗಿತ್ತಾಯ ಸ್ವಾಗತಿಸಿ, ರೇವತಿ ಬಿ ವಂದಿಸಿದರು. ಸುಕುಮಾರ ಆಲಂಪಾಡಿ ನಿರೂಪಿಸಿದರು.