ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ನಿವಾಸಿ ಮಹಾಲಿಂಗ ಭಟ್ಟರದ್ದು- ಪತ್ನಿ ಮತ್ತು ಪುತ್ರ (ವಿದ್ಯಾರ್ಥಿ) ಹಾಗೂ ಮಗಳು (ವಿವಾಹಿತೆ) ಒಳಗೊಂಡ ಪುಟ್ಟ ಸಂಸಾರ.
ವೃತ್ತಿಯಲ್ಲಿ ಟೈಲರ್ ಹಾಗೂ ಹವ್ಯಾಸಿ ಯಕ್ಷಗಾನ ಮೃದಂಗ ವಾದಕರಾದ ಭಟ್ಟರು ತನಗೆ ಬರುವ ಅಲ್ಪ ಆದಾಯದಿಂದ ಮಕ್ಕಳ ವಿದ್ಯಾಭ್ಯಾಸ ಹಾಗೂ ಸಂಸಾರ ನಿರ್ವಹಣೆಯನ್ನು ತನ್ನ ಪತ್ನಿ ದುರ್ಗಾಪರಮೇಶ್ವರಿ ಸಹಕಾರದೊಂದಿಗೆ ನಡೆಸುತ್ತಿದ್ದರು. ಆದರೆ 3 ವರ್ಷದ ಹಿಂದೆ ಪತ್ನಿಗೆ ಬಾಧಿಸಿದ ಪಕ್ಷಾಘಾತದಿಂದಾಗಿ ಚಿಕಿತ್ಸೆಗೆ ಲಕ್ಷಾಂತರ ರೂ. ಸಾಲ ಮಾಡಿದ ಭಟ್ಟರು ಹಾಗೂ ಹೀಗೂ ಹೊಂದಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ 10 ದಿನಗಳ ಹಿಂದೆ ನೀರ್ಚಾಲು ಸಮೀಪ ನಡೆದ ಅಪಘಾತದಲ್ಲಿ ಭುಜಕ್ಕೆ ತೀವ್ರ ಗಾಯಗೊಂಡ ಮಹಾಲಿಂಗ ಭಟ್ಟರಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದಾಗಿಯೂ ಮಾತ್ರವಲ್ಲ ದೀರ್ಘ ಕಾಲದ ವಿಶ್ರಾಂತಿಯ ಅಗತ್ಯವಿರುವುದಾಗಿಯೂ ತಿಳಿಸಿರುತ್ತಾರೆ. ಇವರೊಬ್ಬರ ಆದಾಯವನ್ನು ನಂಬಿರುವ ಕುಟುಂಬಕ್ಕೆ ದಿಕ್ಕು ತೋಚದೆ ನೀರ್ಚಾಲು ನಿವೇದಿತಾ ಸೇವಾ ಮಿಷನ್ ನ್ನು ಸಂಪರ್ಕಿಸಿ ಸಹಾಯವನ್ನು ಅಪೇಕ್ಷಿಸಿರುತ್ತಾರೆ. ಆದುದರಿಂದ ಉದಾರ ಮನಸ್ಸಿನ ದಾನಿಗಳು ಸಹಾಯ ಮಾಡಲು ಖಾತೆ ವಿವರ: ಶಂಕರ ಪ್ರಕಾಶ್, ಮಹಾಲಿಂಗ ಭಟ್ ಅವರ ಮಗ, ಕರ್ನಾಟಕ ಬ್ಯಾಂಕ್ ನೀರ್ಚಾಲು ಶಾಖೆ. ಖಾತೆ ಸಂಖ್ಯೆ 5322500100735401, ಐಎಫ್‍ಎಸ್‍ಸಿ ಕೋಡ್- ಕೆಎಆರ್‍ಬಿ0000532 ನೆರವಾಗಬಹುದಾಗಿದೆ.