ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಲಾದ ವಿವಿಧ ಪ್ರದರ್ಶನಗಳು ಗಮನ ಸೆಳೆದವು.
ಪುಸ್ತಕ ಪ್ರದರ್ಶನ ಮಳಿಗೆ ಮತ್ತು ಚಿತ್ರಕಲಾ ಪ್ರದರ್ಶನವನ್ನು ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು ಪುಸ್ತಕಗಳ ಓದು ಜಗತ್ತಿನ ಅನುಭವಗಳನ್ನು ತೆರೆದುಕೊಡುವಲ್ಲಿ ನೆರವಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಪಠ್ಯ ಕಲಿಕೆಗಿಂತ ಹೆಚ್ಚಿನ ಅನುಭವಗಳನ್ನು ಪುಸ್ತಕಗಳ ಓದು ಒದಗಿಸುತ್ತದೆ ಎಂದು ತಿಳಿಸಿದರು. ಹೆಚ್ಚು ಓದು ಮತ್ತು ಬರಹ ವ್ಯಕ್ತಿ-ವ್ಯಕ್ತಿತ್ವವನ್ನು ಪೂರ್ಣಗೊಳಿಸುತ್ತದೆ ಎಂದರು.
ಚಿತ್ರಕಲೆಗಳು ಸುಪ್ತ ಭಾವಗಳನ್ನು ಪ್ರದರ್ಶಿಸುವ ಉತ್ತಮ ಕ್ರಿಯಾತ್ಮಕತೆಯಾಗಿದ್ದು, ಅಂತರಾಳದ ಬೇಗುದಿಗಳಿಗೆ ನೆಮ್ಮದಿ ನೀಡುತ್ತದೆ. ಸೃಜನಾತ್ಮಕ ಚಿತ್ರಗಳು ಮೂಡಿಬರಲಿ ಎಂದು ಹಾರೈಸಿದರು.
ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು, ಕರ್ನಾಟಕ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಬದಿಯಡ್ಕ, ವಿವೇಕ ಜಾಗೃತಿ ಬಳಗದ ಸದ್ಗ್ರಂಥ ಮಾರಾಟ ಕೇಂದ್ರ, ಸವಿತಾ ಎಸ್.ಭಟ್ ಅಡ್ವಾಯಿ ಅವರ ಪುಸ್ತಕ ಸಂಗ್ರಮ ಮೊದಲಾದವುಗಳು ಗಮನ ಸೆಳೆದವು. ನೀರ್ಚಾಲು ಶಾಲಾ ವಿದ್ಯಾರ್ಥಿಗಳ ವಸ್ತು ಪ್ರದರ್ಶನ, ಬಾಯಾರು ಸರವಿನ ಭಟ್ರಮನೆ ಗೃಹೋತ್ಪನ್ನ ಮಾರಾಟ ಮಳಿಗೆ ಮೊದಲಾದವುಗಳು ಜನಮನಸೂರೆಗೊಂಡವು. ಎಸ್.ಬಿ.ಕೋಳಾರಿ, ಜಯಪ್ರಕಾಶ ಶೆಟ್ಟಿ ಬೇಳ, ರಮೇಶ್ ನಾಯಕ್ ಅವರ ವರ್ಣ ಚಿತ್ರಗಳು,ಬಾಲ ಮಧುರಕಾನನ, ವೆಂಕಟ ಭಟ್ ಎಡನೀರು ಅವರ ಕಾರ್ಟೂನ್ ಗಳು, ವಿರಾಜ ಅಡೂರು ಅವರ ಯಕ್ಷರೇಖಾ ಚಿತ್ರಗಳು ನೋಡುಗರ ಮನಗೆಲ್ಲುವಲ್ಲಿ ಸಫಲವಾಯಿತು.
ಅಚ್ಚುಕಟ್ಟಾದ ಊಟದ ವ್ಯವಸ್ಥೆ, ಚಾ ತಿಂಡಿ ವ್ಯವಸ್ಥೆಗಳು ಮನ ತಣಿಸಿದವು. ನೀರ್ಚಾಲು ಶಾಲಾ ಪ್ರಬಂಧಕ ಜಯದೇವ ಖಂಡಿಗೆ, ಮುಖ್ಯೋಪಾಧ್ಯಾಯ ವೆಂಕಟರಾಜ ಸಿ.ಎಚ್, ಪ್ರಾಂಶುಪಾಲ ಶಿವಪ್ರಕಾಶ ಎಂ.ಕೆ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಎಚ್.ಎನ್, ಉದನೇಶವೀರ ಕಿಳಿಂಗಾರು.ಎಸ್ ಎನ್ ಭಟ್ ಅರ್ಜುನಗುಳಿ, ಗೋವಿಂದ ಭಟ್ ಬಳ್ಳಮೂಲೆ, ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್ ವಿ ಭಟ್, ಕಾರ್ಯದರ್ಶಿಗಳಾದ ನವೀನಚಂದ್ರ ಮಾನ್ಯ, ರಾಮಚಂದ್ರ ಭಟ್ ಧರ್ಮತ್ತಡ್ಕ, ಸ್ಥಳೀಯ ರುದ್ರ ಫ್ರೆಂಡ್ಸ್ ಕ್ಲಬ್ ಮೊದಲಾದವರ ನಿರಂತರ ಓಡಾಟ-ಶ್ರಮ ಸಮ್ಮೇಳನದ ಮೊದಲ ದಿನ ಯಶಸ್ವಿಗೊಳ್ಳುವಲ್ಲಿ ಸಹಕರಿಸಿತು.