ಶಿರಸಿ: ಶಂಕರರ ಮಠಗಳು ದುಸ್ಥಿತಿಗೆ ಹೋದಲ್ಲಿ ಧರ್ಮ ದುಸ್ಥಿತಿಯನ್ನು ತಲುಪಿದ ಹಾಗೆ ಆಗಲಿದೆ. ಧರ್ಮ ದುಸ್ಥಿತಿ ತಲುಪಬಾರದು ಎನ್ನುವುದು ನಮ್ಮ ಕಳಕಳಿಯಾಗಿದ್ದು, ಶಂಕರ ಭಗತ್ಪಾದರ ತತ್ವ ನಮ್ಮ ಮನೆ, ಮನಸ್ಸನ್ನು ತಲುಪಲಿ. ಶಂಕರರ ಎಲ್ಲಾ ಪರಂಪರೆಯ ಮಠಗಳು ಹಾಗೂ ಅವರ ಶಿಷ್ಯಂದಿರಿಂದ ಸ್ಥಾಪಿತವಾದ ಮಠಗಳು ಉಳಿಯಬೇಕು. ಆಗ ಮಾತ್ರ ಧರ್ಮ ಉಳಿಯಲು ಸಾಧ್ಯವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀಗಳಾದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹೇಳಿದರು.
ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ಭಾನುವಾರ ನಡೆದ ಶಂಕರ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅನುಗ್ರಹ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಶಂಕರ ಪರಂಪರೆಯ ಮಠದ ಶ್ರೀಗಳೊಬ್ಬರ ಕಳಂಕದ ಕುರಿತು ನ್ಯಾಯಾಲಯ ವಿಳಂಬ ಮಾಡದೇ ವೇಗ ನಿರ್ಣಯ ಕೊಡಲಿ. ಕೆಲವೊಂದು ಕಾರಣದಿಂದ ವಿಳಂಬವಾಗುತ್ತಿದ್ದು, ಯಾವದಕ್ಕೂ ಹೆದರದೇ ಬಗ್ಗದೇ ಶೀಘ್ರ ನಿರ್ಣಯ ನೀಡಿ ಮಠ, ಸಮಾಜ ಉಳಿಸಬೇಕು ಎಂದರು.
ಅಖಿಲ ಹವ್ಯಕ ಒಕ್ಕೂಟ ಶಂಕರ ಪರಂಪರೆಯ ಮಠವನ್ನು ಉಳಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ಕಳಂಕ ಹೊತ್ತಿರುವ ಶಂಕರ ತತ್ವದ ಇನ್ನೊಂದು ಮಠವನ್ನೂ ಉಳಿಸಬೇಕು ಎನ್ನುವುದು ನಮ್ಮ ಆಶಯವಾಗಿದೆ. ಶಂಕರ ತತ್ವದ ಪತನದತ್ತ ಮಠ ಸಾಗುತ್ತಿದ್ದು, ಇದು ಆಗಬಾರದು ಎಂದು ಸೂಚಿಸಿ ಬೆಂಬಲ ನೀಡಲಾಗಿದೆ. ಅಖಿಲ ಭಾರತ ಹವ್ಯಕ ಮಹಾಸಭೆ ಸರಿ ದಾರಿಗೆ ಬಂದಲ್ಲಿ ಹವ್ಯಕ ಒಕ್ಕೂಟ ವಿಲೀನ ಆಗುವುದಾಗಿ ತಿಳಿಸಿದ್ದು, ಒಕ್ಕೂಟಕ್ಕೆ ಸಕಾರಾತ್ಮಕ ಗುರಿಯಿದೆ. ಯಾರನ್ನೋ ನೋಯಿಸಬೇಕು, ತೊಂದರೆ ಕೊಡಬೇಕು ಎನ್ನುವ ಉದ್ದೇಶವಿಲ್ಲ. ಒಕ್ಕೂಟದ ಸ್ಥಾಪನೆ ಶಂಕರ ಪರಂಪರೆ ಉಳಿಸಬೇಕು ಎನ್ನುವುದು ಕಟ್ಟಕಡೆಯ ಉದ್ದೇಶವಾಗಿದೆ ಎಂದರು.
ಯಡತೊರೆ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಮಾತನಾಡಿ, ಸನ್ಯಾಸಾಶ್ರಮಕ್ಕೆ ವೇದ ಪ್ರಮಾಣವಾದರೆ, ಮಠಾಧೀಶರಿಗೆ ಶಂಕರರ ಮಠಾನ್ಯಾಮ್ನ್ಯಾಯವೇ ಪ್ರಮಾಣವಾಗಿದೆ. ಆದರೆ ಸನ್ಯಾಸಾಶ್ರಮದಿಂದ ಪತಿತರಾದ ಸ್ವಾಮಿಜಿಯನ್ನು ಸಂವರ್ಧಿನಿ ಸಭಾದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾಗಿದೆ. ಅಲ್ಲದೇ, ಮಠವು ಯೋಗ್ಯ, ನಿಷ್ಕಾಮ ವ್ಯಕ್ತಿಯನ್ನು ಮಠಾಧಿಪತಿಯನ್ನಾಗಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಇದನ್ನು ಕೂಡ ಖಂಡಿಸಲಾಗಿದೆ. ಇಂಥ ನಿರ್ಣಯವನ್ನು ಸಂವರ್ಧಿನಿ ಸಭಾ ಒಪ್ಪಲು ಸಾಧ್ಯವಿಲ್ಲ ಎಂದರು.
ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮಾತನಾಡುತ್ತ, ಗುರುಭಕ್ತಿಯಲ್ಲಿ ಬಂದವರ ದಾಹ ನೀಗಿಸಬೇಕೇ ವಿನಾ ಭಕ್ತರಲ್ಲಿ ತಮ್ಮ ತೃಷೆ ತೀರಿಸಿಕೊಳ್ಳುವವ ಗುರುವಾಗಲಾರ. ಆಚಾರ ಅನುಸರಿಸದಿದ್ದರೆ ಶಂಕರ ಪರಂಪರೆಯ ಪೀಠದಲ್ಲಿ ಯಾವುದೇ ಸ್ವಾಮೀಜಿ ಕುಳಿತುಕೊಳ್ಳುವುದು ಸರಿಯಲ್ಲ ಎಂದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶೃಂಗೇರಿ ಮಠದ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ.ವಿ.ಆರ್.ಗೌರಿಶಂಕರ್, ಕಲಿಯುಗದಲ್ಲಿ ಧರ್ಮದ ಹಾದಿಯಲ್ಲಿ ನಡೆಯುತ್ತಿರುವ ಧರ್ಮ ಗುರುಗಳ ಅವಶ್ಯಕತೆಯಿದೆ. ಪ್ರತಿಯೊಬ್ಬ ನಲ್ಲಿಯೂ ಧರ್ಮ ಅಧರ್ಮವಿದೆ. ಆದ್ದರಿಂದ ಕಲಿಯುಗದಲ್ಲಿ ಮನುಷ್ಯನೇ ನನ್ನಲ್ಲಿ ಯಾವುದಿದೇ ಎಂದು ತಿಳಿದು ಅಧರ್ಮದಿಂದ ದೂರ ಹೋಗಬೇಕು. ನಮಗೆ ಆ ದಾರಿ ತೋರಿಸುವವರು ಧರ್ಮ ಗುರುಗಳು. ಆಗ ಧರ್ಮಿಷ್ಠರಾಗಿ ಜೀವನ ನಡೆಸಲು ಸಾಧ್ಯ. ಸನಾತನ ಧರ್ಮದ ಕುರಿತು ಶಂಕಕರು ತಿಳಿಸಿದಂತೆ ನಾವು ಜೀವನವನ್ನು ನಡೆಸಬೇಕು ಎಂದು ಪ್ರತಿಪಾದಿಸಿದರು.
ಇನ್ನೊರ್ವ ಅತಿಥಿ ಅಕ್ಷರಂ ಸಂಸ್ಥೆಯ ಜನಾರ್ಧನ ಹೆಗಡೆ ದೆವದಕೇರಿ , ಸಂಸ್ಕೃತ ಭಾಷೆಯಲ್ಲಿ ಸಾಕಷ್ಟು ವೈಜ್ಞಾನಿಕ ಸತ್ಯಗಳಿವೆ. ಸಂಸ್ಕೃತ ಭಾಷೆಯನ್ನು ಅವಗಣನೆ ಮಾಡದೇ ಪೋಷಣೆ ಮಾಡಬೇಕು. ಇಂದು ಸಂಸ್ಕೃತ ಭಾಷೆ ಸಮಾಜದಿಂದ ದೂರ ಆಗುತ್ತಿದ್ದು, ಅದಕ್ಕೆ ನಾವು ಪ್ರೋತ್ಸಾಹ ನೀಡಿ ಬೆಳೆಸಬೇಕು ಎಂದರು.
ಗ್ರಂಥ , ಸಿಡಿ ಬಿಡುಗಡೆ , ಸಮ್ಮಾನ:
ಯೋಗ ಪ್ರಕಾಶಿಕೆ ಗ್ರಂಥವನ್ನು ಹಾಗೂ ಮಠದ 25 ವರ್ಷದ ಇತಿಹಾಸವುಳ್ಳ ಸ್ವರ್ಣ ಪಥ ಸಿಡಿಯನ್ನು ಗುರುತ್ರಯರು ಲೋಕಾರ್ಪಣೆ ಮಾಡಿದರು. ಮಾತೃ ಮಂಡಲ ಸದಸ್ಯರು ಶಂಕರ ಸ್ತೋತ್ರ ಪಠಣವನ್ನು ಮಾಡಿದರು. ಜಿ.ಮಹಾಬಲೇಶ್ವರ ಭಟ್ ಹಿತ್ಲಳ್ಳಿ, ವಿ.ಅನಂತ ಶರ್ಮಾ ಭುವನಗಿರಿ, ಟಿ.ಶ್ಯಾಮ್ ಭಟ್ ಹಾಗೂ ಎಮ್.ಆರ್.ಹೆಗಡೆ ಗೊಡವೆಮನೆ ಅವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಐದು ಸಾವಿರಕ್ಕೂ ಅಧಿಕ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಖಿಲ ಹವ್ಯಕ ಒಕ್ಕೂಟದ ಪ್ರಮುಖ ಅಶೋಖ ಭಟ್ಟ ಶಿವಮೊಗ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜರಾಜೇಶ್ವರಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ವಿ.ಎಮ್.ಹೆಗಡೆ ಬೊಮ್ನಳ್ಳಿ ಸ್ವಾಗತಿಸಿದರು. ಆರ್.ಎಸ್.ಹೆಗಡೆ ಭೈರುಂಬೆ ವಂದಿಸಿದರು. ಸುರೇಶ ಹೆಗಡೆ ಹಕ್ಕೀಮನೆ ಹಾಗೂ ಪ್ರೊ.ಕೆ.ವಿ.ಭಟ್ಟ ಕಾರ್ಯಕ್ರಮ ನಿರೂಪಿಸಿದರು.