ತಿರುವನಂತಪುರ: ಶಬರಿಮಲೆಯಲ್ಲಿ ಆಚಾರ ಅನುಷ್ಠಾನಗಳನ್ನು ಉಲ್ಲಂಘಿಸುವ ಯತ್ನವನ್ನು ಪ್ರತಿಭಟಿಸಿ ನಡೆಸಲಾಗುತ್ತಿರುವ ಹೋರಾಟಗಳನ್ನು ಇನ್ನಷ್ಟು ತೀವ್ರಗೊಳಿಸಲು ಶಬರಿಮಲೆ ಕ್ರಿಯಾ ಸಮಿತಿಯು ತೀರ್ಮಾನಿಸಿದೆ. ಇದರಂತೆ ಜ.11, 12 ಮತ್ತು 13ರಂದು ರಾಜ್ಯದ ಎಲ್ಲ ಜಿಲ್ಲಾ ಮಟ್ಟದಲ್ಲಿ ಅಯ್ಯಪ್ಪ ರಥಯಾತ್ರೆ ನಡೆಸಲು ಮತ್ತು ಜ.18ರಂದು ತಿರುವನಂತಪುರದ ಸೆಕ್ರೆಟರಿಯೇಟ್‍ಗೆ ಪ್ರತಿಭಟನಾ ಮಾರ್ಚ್ ನಡೆಸಲು ಅಯ್ಯಪ್ಪ ಕ್ರಿಯಾ ಸಮಿತಿಯು ನಿರ್ಧರಿಸಿದೆ.
ಮಾತ್ರವಲ್ಲದೆ ಪ್ರತಿಭಟನೆಯನ್ನು ದೇಶ - ವಿದೇಶಕ್ಕೂ ವಿಸ್ತರಿಸಲು ಸಮಿತಿ ತೀರ್ಮಾನಿಸಿದೆ. ರಥಯಾತ್ರೆಯನ್ನು ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ಹೊರತುಪಡಿಸಲಾಗಿದೆ. ಜ.14ರ ಮಕರಜ್ಯೋತಿಯಂದು ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಮತ್ತು ಅಯ್ಯಪ್ಪ ಭಕ್ತರ ಮನೆಗಳಲ್ಲಿ 18 ಕೋಟಿ ಅಯ್ಯಪ್ಪ ಜ್ಯೋತಿ ಬೆಳಗಿಸುವ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಜ.18ರಂದು ಸೆಕ್ರೆಟರಿಯೇಟ್‍ಗೆ ನಡೆಸಲಾಗುವ ಪ್ರತಿಭಟನಾ ಮಾರ್ಚ್‍ನಲ್ಲಿ ಅಯ್ಯಪ್ಪ ಕ್ರಿಯಾ ಸಮಿತಿ ಒಳಗೊಂಡು 120 ಸಂಘಟನೆಗಳ ನೇತಾರರು ಭಾಗವಹಿಸಲಿದ್ದಾರೆ ಎಂದು ಕ್ರಿಯಾ ಸಮಿತಿಯ ರಾಜ್ಯ ಪ್ರಚಾರ ಸಂಚಾಲಕ ಎಸ್.ಜಿ.ಆರ್.ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.