ತಿರುವನಂತಪುರ: ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆದ ವಿವಿಧ ರೀತಿಯ ದೌರ್ಜನ್ಯಗಳಿಗೆ ಸಂಬಂಧಿಸಿ 66,080 ಪ್ರಕರಣಗಳನ್ನು ವಿವಿಧ ಜಿಲ್ಲೆಗಳ ಪೆÇಲೀಸ್ ಠಾಣೆಗಳಲ್ಲಾಗಿ ದಾಖಲಿಸಲಾಗಿದೆ. ಹೊಸದಿಲ್ಲಿಯನ್ನು ಪ್ರಧಾನ ಕೇಂದ್ರವನ್ನಾಗಿಸಿ ಕಾರ್ಯವೆಸಗುತ್ತಿರುವ ರಾಷ್ಟ್ರೀಯ ಗರಿಮಾಲ್ಲಿ ಅಭಿಯಾನ್ ಎಂಬ ಹೆಸರಿನ ಸಂಘಟನೆಯು ನಡೆಸಿದ ಸಮೀಕ್ಷಾ ವರದಿಯಲ್ಲಿ ಈ ಅಂಕಿ ಅಂಶಗಳನ್ನು ನೀಡಲಾಗಿದೆ.
ಈ ಮೂಲಕ ಕೇರಳದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚುತ್ತಿರುವುದನ್ನು ಕಂಡುಕೊಳ್ಳಲಾಗಿದೆ. 2016ರಲ್ಲಿ ರಾಜ್ಯದಲ್ಲಿ 1673 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದರಲ್ಲಿ 19 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಒಳಗೊಂಡಿವೆ. ಈ ಅವಧಿಯಲ್ಲಿ ಮಕ್ಕಳ ವಿರುದ್ಧ ನಡೆದ ವಿವಿಧ ರೀತಿಯ ದೌರ್ಜನ್ಯ ದೂರಿನಂತೆ 957 ಕೇಸುಗಳನ್ನು ದಾಖಲಿಸಲಾಗಿದೆ.
ಕೇರಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳಲ್ಲಿ ಶೇಕಡಾ 16.50ಯಷ್ಟು ಅತ್ಯಾಚಾರ ಪ್ರಕರಣಗಳು ಒಳಗೊಂಡಿವೆ. ಇದೇ ವೇಳೆ ಮಹಿಳೆಯರ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶೇಕಡಾ 10.70ಯಷ್ಟು ಪ್ರಕರಣಗಳ ಆರೋಪಿಗಳು ಮಾತ್ರವೇ ಶಿಕ್ಷೆಗೊಳಗಾಗುತ್ತಿದ್ದಾರೆ.
ಇಂತಹ ಪ್ರಕರಣಗಳ ಪೈಕಿ ಶೇಕಡಾ 92.70ಯಷ್ಟು ಪ್ರಕರಣಗಳು ತೀರ್ಪು ಕಲ್ಪಿಸದೆ ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಬಾಕಿಯಿವೆ. ಇನ್ನೊಂದೆಡೆ ಕಳೆದ ಐದು ವರ್ಷಗಳಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಾಗಿ ಮಕ್ಕಳ ವಿರುದ್ಧ ನಡೆದ ವಿವಿಧ ದೌರ್ಜನ್ಯಗಳಿಗೆ ಸಂಬಂಧಿಸಿ 10,429 ಪ್ರಕರಣಗಳು ದಾಖಲಾಗಿವೆ ಎಂದು ಇದೇ ವರದಿಯಲ್ಲಿ ತಿಳಿಸಲಾಗಿದೆ.