ಮಂಜೇಶ್ವರ: ಕಲಾಕ್ಷೇತ್ರಗಳಲ್ಲಿ ಬದಲಾವಣೆ ಸಹಜ. ಆದರೆ ಕಲೆಯ ಮೂಲ ಆಶಯಕ್ಕೆ ಧಕ್ಕೆ ತರುವ ಪರಿವರ್ತನೆ ಸಲ್ಲದು ಎಂದು ಖ್ಯಾತ ವಿದ್ವಾಂಸ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಷಿ ಅಭಿಪ್ರಾಯಪಟ್ಟರು.
ಮೀಯಪದವಿನಲ್ಲಿ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ತಂಜಾವೂರು, ರಂಗಚೇತನ ಸಂಸ್ಕøತಿ ಕೇಂದ್ರ ಬೆಂಗಳೂರು ಹಾಗೂ ಚೌಟರ ಪ್ರತಿಷ್ಠಾನ ಮೀಯಪದವು ಇದರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಯಕ್ಷರಂಗೋತ್ಸವ - 2018 ರ ಸೋಮವಾರ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಯಕ್ಷಗಾನ ಜೀವಂತ ಕಲೆ. ಅದರ ಹಿರಿಯ ಕಲಾವಿದರು ಪಾತ್ರ ವಹಿಸುವ ಬದಲು ಅವರ ನಿರ್ದೇಶನದಲ್ಲಿ ಯಕ್ಷಗಾನಗಳು ನಡೆಯಬೇಕು. ಕಲೆಯ ಕುರಿತು ಅತಿ ಭಕ್ತಿ ಅಥವಾ ಅತಿ ತಿರಸ್ಕಾರ ಎರಡೂ ಅಪಾಯಕಾರಿ. ಯಕ್ಷಗಾನದ ವೇಷಭೂಷಣ ಆವಿಷ್ಕಾರ ನಾಟಕೀಯವಾಗಬಾರದು ಎಂದು ಅವರು ತಿಳಿಸಿದರು. ಎತ್ತರ ಕಿರೀಟದ ರಾವಣನ ಮುಂದೆ ರಾಮನೂ ಕಿರೀಟಧಾರಿಯೇ ಆಗಿರಬೇಕು. ಅದು ಯಕ್ಷಗಾನದ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಪರಂಪರೆಯ ಅರಿವನ್ನು ಮೂಡಿಸುವ ಪ್ರಯತ್ನಗಳು ಇಂದು ಆಗಬೇಕು ಎಂದು ಅವರು ಸಲಹೆಯನ್ನಿತ್ತರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ಸಿ ಚೌಟರು ಯಕ್ಷಗಾನಕ್ಕೆ ಜೋಷಿಯವರ ಕೊಡುಗೆ ಅನನ್ಯ ಎಂದು ಕೊಂಡಾಡಿ ಯಕ್ಷಗಾನ ತನಗೆ ಸಂಸ್ಕøತಿ ಕಲಿಸಿ ಬೆಳೆಯುವಲ್ಲಿ ನೆರವಾಗಿದೆ ಎಂದು ತಿಳಿಸಿದರು. ರಂಗಚೇತನ ಸಂಸ್ಕøತಿ ಕೇಂದ್ರದ ವ್ಯವಸ್ಥಾಪಕ ಧರ್ಮದರ್ಶಿ ತೊಟ್ಟವಾಡಿ ನಂಜುಂಡ ಸ್ವಾಮಿ ಸ್ವಾಗತಿಸಿ, ಶ್ರೀಧರ ರಾವ್ ವಂದಿಸಿದರು. ರಾಜಾರಾಮ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ ಇವರಿಂದ ಶ್ರೀದೇವಿ ಮಹಿಷಮರ್ದಿನಿ ಎಂಬ ಯಕ್ಷಗಾನ ಬಯಲಾಟ ಜರಗಿತು.