ಕುಂಬಳೆ: ತರಗತಿಗಳಲ್ಲಿ ನೀಡಲಾದ ಕಲಿಕೆಯ ಸನ್ನಿವೇಶಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿವೆ ಎಂದು ರಕ್ಷಕರು ತಿಳಿದುಕೊಳ್ಳುವುದಕ್ಕಾಗಿ ಕೇರಳ ಸರಕಾರವು ಅಪೂರ್ವ ಕಾರ್ಯಕ್ರಮವಾಗಿ ಕಲಿಕಾ ಉತ್ಸವ ಏರ್ಪಡಿಸಿದೆ. ನಾಡಿನ ಪ್ರತಿಯೊಂದು ಶಾಲೆಯಲ್ಲೂ ಇದು ಯಶಸ್ವಿಯಾಗಿ ನಡೆಯಬೇಕು ಆಮೂಲಕ ರಕ್ಷಕರು ಶಾಲೆಯಲ್ಲಿ ನಡೆದ ಕಲಿಕೆ ಪ್ರಕ್ರಿಯೆಯ ಕುರಿತಾದ ಸ್ಪಷ್ಟ ತಿಳುವಳಿಕೆ ಪಡೆಯಲು ಸಾಧ್ಯ ಎಂದು ಕುಂಬಳೆ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಪುಂಡರೀಕಾಕ್ಷ ಕೆಎಲ್ ಅವರು ನುಡಿದರು.
ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಕುಂಬಳೆ ಪಂಚಾಯತಿ ಮಟ್ಟದ ಕಲಿಕಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳ ಸರಕಾರದ ಶಿಕ್ಷಣ ಇಲಾಖೆಯು ಎರಡನೇ ತರಗತಿಯಿಂದ ಮೇಲಿನ ಮಕ್ಕಳು ಕಲಿತಿರುವುದನ್ನು ಪ್ರದರ್ಶಿಸುವಂತೆ ಹೇಳಿದ್ದರೆ ಪೇರಾಲು ಶಾಲೆಯಲ್ಲಿ ಪೂರ್ವಪ್ರಾಥಮಿಕ ತರಗತಿಯವರೂ ಸಹಿತ ಎಲ್ಲ ಮಕ್ಕಳಿಂದ ಚಟುವಟಿಕೆಗಳ ಪ್ರದರ್ಶನವಾಗಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಅವರು ಹೇಳಿದರು. ವಾರ್ಡನ್ನು ಪ್ರತಿನಿಧಿಸುವ ಕುಂಬಳೆ ಗ್ರಾಮ ಪಂಚಾಯತು ಸದಸ್ಯ ವಿಪಿ ಅಬ್ದುಲ್ ಖಾದರ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಮೊಯ್ದೀನ್, ಮಾತೆಯರ ಸಂಘದ ಅಧ್ಯಕ್ಷೆ ಹಸೀನ, ಕ್ಲಸ್ಟರ್ ಸಂಯೋಜಕಿ ಮೀನಾಕ್ಷಿ ಟೀಚರ್ ಶುಭ ಹಾರೈಸಿದರು. ಅಫ್ಸ ಟೀಚರ್ ಸ್ವಾಗತಿಸಿ ಚಿತ್ರಕಲ ಟೀಚರ್ ವಂದಿಸಿದರು. ಚಿತ್ರಕಲ ಟೀಚರ್ ಅವರ ವತಿಯಿಂದ ಮಕ್ಕಳಿಗೂ ರಕ್ಷಕರಿಗೂ ಪಾಯಸ ವಿತರಣೆ ನಡೆಯಿತು. ಸಂಜೆಯ ವರೆಗೆ ವಿವಿಧ ತರಗತಿಗಳಲ್ಲಿ ಭಾಷೆ, ಗಣಿತ ಹಾಗೂ ಪರಿಸರ ಅಧ್ಯಯನ ವಿಷಯಗಳಲ್ಲಿ ಮಕ್ಕಳಿಂದ ವಿವಿಧ ಚಟುವಟಿಕೆಗಳ ಪ್ರದರ್ಶನ ನಡೆಯಿತು.