ಶಬರಿಮಲೆ ವಿಷಯಗಳಿಗೆ ಸಂಬಂಧಿಸಿ ವೈದಿಕ ವಿದ್ವಾಂಸ ಕೇಶವ ಭಟ್ ಕೇಕಣಾಜೆ ಅವರ ಬರಹ:
ಪ್ರಪಂಚದ ನೂರಾರು ದೇಶಗಳಲ್ಲಿ ನಮ್ಮ ಭಾರತದೇಶಕ್ಕೆ ವಿಶಿಷ್ಟವಾದ ಗುಣಲಕ್ಷಣಗಳಿವೆ. ಹುಟ್ಟನ್ನು ಕಾಣದ ದೇಶ ನಮ್ಮದು. ಆದ್ದರಿಂದ ಅಂತ್ಯವೂ ಕಾಣದು. ಆದ್ಯಂತರಹಿತವಾದ ನಮ್ಮ ದೇಶವನ್ನು ಮೃತ್ಯುಂಜಯಭಾರತವೆನ್ನುವರು. ಈ ಪುಣ್ಯಭೂಮಿಯಲ್ಲಿ ಅದೆಷ್ಟು ಅಲೌಕಿಕಶಕ್ತಿಗಳು, ಋಷಿಮುನಿಗಳು, ಸಂತರು, ಮಹಾತ್ಮರು ನಡೆದಾಡಿದ್ದು ಎಷ್ಟು ಸತ್ಯವೋ ಅನೇಕಕ್ಷೇತ್ರಗಳು, ತೀರ್ಥಗಳು ಇರುವುದೂ ಅಷ್ಟೇ ಸತ್ಯ. ಹಾಗಾಗಿ ನಮ್ಮದು ಸಾಧನಾಭೂಮಿಯೆಂದೆನಿಸಿದೆ. ಈ ದೇಶದಲ್ಲಿ ನಂಬಿಕೆ-ಶ್ರದ್ಧೆ-ನಿಷ್ಠೆಗಳಿಗೆ ಪ್ರಾಧಾನ್ಯವನ್ನು ಕೊಟ್ಟಿದ್ದಾರೆ. ಯಾಕೆಂದರೆ ಈ ಮಣ್ಣಿನ ನಂಬಿಕೆ-ಶ್ರದ್ಧೆ-ನಿಷ್ಠೆಗಳಿಗೆ ವಿಶೇಷವಾದ ಶಕ್ತಿಯಿದೆ ಎಂಬುದು ಶ್ರದ್ಧಾಳುಗಳಾದ ಭಾರತೀಯರಿಗೆ ಅನುಭವವೇದ್ಯವಿಚಾರ. ಋಷಿಮುನಿಗಳ ತಪಸ್ಸಿನ ಅಪ್ರಮೇಯಶಕ್ತಿಯು ಈ ಮಣ್ಣಿನಲ್ಲಿ ಒಂದಾಗಿದೆ. ಕೈಯಲ್ಲಿ ಹಿಡಿದ ಒಂದುಹಿಡಿ ಮಣ್ಣಿಗೂ ದೇವಪ್ರಸಾದದ ಗುಣವಿದೆ ಎಂದರೂ ತಪ್ಪಾಗಲಾರದು.
ಇಂಥಹ ಪುಣ್ಯಭೂಮಿಯಾದ ಭಾರತದಲ್ಲಿ ಮಠ-ಮಂದಿರಗಳು, ದೇವಸ್ಥಾನಗಳು ಇರುವುದು ದೇಶರಕ್ಷಣೆಗೆಂದು. ಅದರಲ್ಲೂ ಇಲ್ಲಿಯ ಪ್ರತಿಯೊಂದು ಪ್ರಾಚೀನಕ್ಷೇತ್ರಗಳು ಶಕ್ತಿಯ ಕ್ಷೇತ್ರಗಳೇ ಆಗಿವೆ. ಪಾಪಪರಿಹಾರಕಕ್ಷೇತ್ರಗಳೇ ಆಗಿವೆ. ಯಾಕೆಂದರೆ ಆಯಾಯ ಕ್ಷೇತ್ರಗಳ ಪ್ರತಿಷ್ಠಾಕಾಲದಲ್ಲಿ ವಿಶೇಷವಾದ ರೀತಿ-ರಿವಾಜುಗಳನ್ನು, ಕಟ್ಟುಪಾಡುಗಳನ್ನು, ನಿತ್ಯನೈಮಿತ್ತಿಕವಿಧಿಗಳನ್ನು ನಿಶ್ಚಯಿಸಿರುತ್ತಾರೆ. ಆ ನಿಯಮಗಳೇ ಆಯಾಯ ದೇವರುಗಳ ಸಾನ್ನಿಧ್ಯವೃದ್ಧಿಗೆ ಕಾರಣಗಳಾಗುತ್ತವೆ. ಆಚಾರ್ಯತಪಸ್ಸು, ತತ್ತದ್ದೇವತಾಮಂತ್ರಗಳ ನಿರಂತರಪಠನ, ನೀತಿನಿಯಮಗಳು, ಕಾಲಕಾಲಕ್ಕೆ ನಿಯತವಾಗಿ ಸಾಗುವ ಉತ್ಸವಗಳು ಮತ್ತು ನಿರಂತರವಾದ ಅನ್ನದಾನ - ಇವು ಐದು ಆಯಾಯಕ್ಷೇತ್ರಗಳ ಸಾನ್ನಿಧ್ಯವೃದ್ಧಿಗೆ ಕಾರಣವಾಗುವ ಶಾಸ್ತ್ರನಿಶ್ಚಿತವಾದ ನಿಯಮಗಳು. ಈ ನಿಯಮಗಳು ಕ್ಷೇತ್ರವೃದ್ಧಿಯ ಜೊತೆಗೆ ಸಮಾಜದ ಸ್ವಸ್ಥತೆಗೂ ಕಾರಣವಾಗುತ್ತವೆ. ಇವನ್ನು ಪಾಲಿಸಿಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಪ್ರಕೃತ ಶ್ರೀಕ್ಷೇತ್ರ ಶಬರಿಮಲೆಯ ವಿಚಾರ. ಒಂದನ್ನು ನೆನಪಿನಲ್ಲಿಡಿ - ನಮಗೆ ಬೇಕುಬೇಕಾದಂತೆ ನೀತಿನಿಯಮಗಳನ್ನು ಗಾಳಿಗೆ ತೂರಲು, ಬದಲಾಯಿಸಲು, ಮೆಟ್ಟಿ ನಿಲ್ಲಲು ಇರುವ ಕ್ಷೇತ್ರವಲ್ಲ ಶ್ರೀಶಬರಿಮಲೆ.!! ಹಾಳುಹರಟೆಕಟ್ಟೆಗಳೋ, ತಂಗುದಾಣವೋ, ಪ್ರವಾಸಿತಾಣವೋ ಅಲ್ವೇ ಅಲ್ಲ..!! ಈ ಕ್ಷೇತ್ರ ಇಂದು-ನಿನ್ನೆಯದು ಅಲ್ಲ..!!! ಇಂದು ಅಲ್ಲಿಯ ಪೂರ್ವನಿಯಮಗಳನ್ನು ವಿರೋಧಿಸುವ ಜನಗಳು ಹುಟ್ಟುವುದಕ್ಕಿಂತ ಎಷ್ಟೋ ಶತಮಾನಗಳ ಹಿಂದೆಯೇ ಪ್ರತಿಷ್ಠೆಯಾದ ಕ್ಷೇತ್ರವದು. ಅಲ್ಲಿಗೆ ಅಲ್ಲಿಯದ್ದೇ ಆದ ಶಿಷ್ಟಾಚಾರಗಳು, ಸಂಪ್ರದಾಯಗಳಿವೆ. ನನ್ನಂಥವರೋ, ನಿಮ್ಮಂಥವರೋ ಮಾಡಿದ್ದನ್ನು ಶಿಷ್ಟಾಚಾರವೆನ್ನುವುದಿಲ್ಲ..!! ಸಂಪ್ರದಾಯವೆಂದು ಕರೆಯಲೂ ಆಗುವುದಿಲ್ಲ..!! ಮಹಾತ್ಮರೆನಿಸಿದ ಋಷಿಮುನಿಗಳೇ ಶಿಷ್ಟರು; ಅವರ ಆಚರಣೆಯೇ ಶಿಷ್ಟಾಚಾರ..!! ಅವರು ಆಚರಿಸಿದ ಲೋಕನಿಯಮವೇ ಸಂಪ್ರದಾಯವಾಯಿತು..!! ಅದನ್ನು ವಿರೋಧಿಸಲು ನಾವೇನು ಋಷಿಗಳೇ...?
ನಮ್ಮ ದೇಶದಲ್ಲಿ ಈ ಶಿಷ್ಟಾಚಾರ-ಸಂಪ್ರದಾಯಗಳು ಪ್ರಾದೇಶಿಕವಾಗಿ ವಿಭಿನ್ನವಾಗಿರುತ್ತದೆ. ಸ್ತ್ರೀಪ್ರವೇಶನಿಷೇಧದ ಕುರಿತಾಗಿ ಶಬರಿಮಲೆಕ್ಷೇತ್ರದ ನಿಯಮವು ಯೋಗ್ಯವಾದದ್ದೇ ಆಗಿದೆ. ಯಾಕೆಂದರೆ ಅದೊಂದು ವಿಶಿಷ್ಟವಾದ ಕ್ಷೇತ್ರ. ಒಂದು ಮಂಡಲದಷ್ಟು ದಿನ(48ದಿನಗಳು) ವ್ರತಸ್ಥರಾಗಿದ್ದು ತೆರಳಬೇಕೆನ್ನುವುದು ನಿಯಮ. ವ್ರತವೆಂದರೆ ಬ್ರಹ್ಮಚರ್ಯವ್ರತದಲ್ಲಿ ಇರಬೇಕು, ಮಧುಮಾಂಸಾದಿವರ್ಜಿತನಾಗಿರಬೇಕು, ನಿಯತಾಹಾರವನ್ನು ಸೇವಿಸಬೇಕು, ಏಕಮನಸ್ಸಿನಿಂದ ಭಗವಚ್ಚಿಂತನೆಯನ್ನು ಮಾಡುತ್ತಿರಬೇಕು ಇತ್ಯಾದಿಯಾಗಿ..!! ಸ್ತ್ರೀಯರ ಶಾರೀರಪ್ರಕೃತಿಯು ಇಂಥಹ ಕಟ್ಟುನಿಟ್ಟಿನ ವ್ರತಕ್ಕೆ ಒಗ್ಗಲಾರದು. ಆದಕಾರಣ ಮಾಸಿಕವಾದ ರಜಸ್ವಲಾದಿನಿಯಮಗಳಿಗೆ ಸ್ತ್ರೀಯರು ಒಳಪಡಬೇಕಾದ ಕಾರಣ ಮುಟ್ಟಾಗುವ ಸ್ತ್ರೀಯರು ಒಳಪ್ರವೇಶಿಸಬಾರದು. ಅಲ್ಲಿಗೆ ಹೋಗಬೇಕಾದ ಉದ್ದೇಶವನ್ನು ಸರಿಯಾಗಿ ಅರ್ಥೈಸಿದರೆ ಆ ಕ್ಷೇತ್ರದ ನಿಯಮಗಳೂ ಅರ್ಥವಾದಾವು..!!! ವ್ರತಸ್ಥರಾಗಿರದ ಪುರುಷರಿಗೂ ಪ್ರವೇಶ ನಿಷಿದ್ಧವೇ..!!! ಅಲ್ಲಿಗೆ ಹೋಗುವುದು ಪಾಪಪರಿಹಾರಕ್ಕೇ ಹೊರತು ಪಾಪಸಂಚಯಕ್ಕಲ್ಲ ಎನ್ನುವುದನ್ನು ಮನಗಾಣೋಣ..!! ವ್ರತ-ನಿಯಮೋಲ್ಲಂಘನೆಯನ್ನು ಮಾಡಿದರೆ ಸಾಮಾಜಿಕವಾದ ಮತ್ತು ವೈಯಕ್ತಿಕವಾದ ಆಪತ್ತುಗಳನ್ನು ಎದುರಿಸಬೇಕಾದೀತು..!!! ಶ್ರೀಕ್ಷೇತ್ರಶಬರಿಮಲೆಯು ನಮ್ಮ ಶ್ರದ್ಧಾಕೇಂದ್ರ..!! ಶ್ರದ್ಧೆಯನ್ನು ನುಚ್ಚುನೂರು ಮಾಡುವ ಹಠಕ್ಕೆ ಇಳಿಯಬೇಡಿ..!! ಶ್ರೀಶಬರಿಮಲೆಯು ಪುಣ್ಯಕ್ಷೇತ್ರವೇ ಹೊರತು ಪ್ರವಾಸಿಕ್ಷೇತ್ರವಲ್ಲ ಎಂಬುದನ್ನು ಸರಿಯಾಗಿ ಅರ್ಥೈಸೋಣ. ಶ್ರೀಕ್ಷೇತ್ರದ ಪೂರ್ವನಿಯಮಗಳನ್ನು ಗೌರವಿಸುತ್ತಾ ಕ್ಷೇತ್ರದ ರಕ್ಷಣೆಯೇ ನಮ್ಮ ಹೊಣೆ..!!! ಅದಕ್ಕಾಗಿ ಹೋರಾಡೋಣ..!!
ಕೇಶವ ಭಟ್ ಕೇಕಣಾಜೆ
ವೈದಿಕ ವಿದ್ವಾಂಸರು. ಪ್ರವಚನಕಾರರು.