ಕುಂಬಳೆ: ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಜಾತ್ರಾ ಮಹೋತ್ಸವಕ್ಕೆ ಕೇವಲ ಗಂಟೆಗಳು ಮಾತ್ರ ಬಾಕಿ ಇರುವಾಗ ಸ್ವಚ್ಛ- ಸುಂದರವಾಗಿರಬೇಕಿದ್ದ ಕುಂಬಳೆ ಪೇಟೆ ಮಾತ್ರ ನಡು ರಸ್ತೆಯಲ್ಲೇ ನಡೆಯುತ್ತಿರುವ ಮೀನು ಮಾರಾಟದಿಂದ ಇಡೀ ಪೇಟೆಯೇ ದುಗರ್ಂಧ ಮಯವಾಗಿ ರೇಜಿಕೆಗೆ ಕಾರಣವಾಗಿದೆ.
ಶ್ರೀ ಕಣಿಪುರೇಷನ ಸನ್ನಿಧಿಗೆ ಆಗಮಿಸುವ ಪ್ರಮುಖ ರಸ್ತೆಯಲ್ಲೊಂದಾದ ಮಾರ್ಕೆಟ್ ರಸ್ತೆಯಲ್ಲಿ ನಡೆಸುವ ಮೀನು ಮಾರಾಟ ವಾಹನ ತಡೆ ನಡೆಸಿ ಭಕ್ತಾದಿಗಳಿಗೆ "ಮತ್ಸ್ಯ ಸಿಂಚನ " ಮತ್ತು ಶ್ರೀದೇವರ ಸುಡುಮದ್ದು ಪ್ರದರ್ಶನ ವೀಕ್ಷಿಸುವ ಕುಂಬಳೆ ಮೈದಾನ ಪಕ್ಕದಲ್ಲಿ ತ್ಯಾಜ್ಯಮಯವಾಗಿ ದುರ್ನಾತ ಬೀರುತ್ತಿದೆ.
ಕುಂಬಳೆ ಗ್ರಾಮ ಪಂಚಾಯತಿನ ಶಾಪಿಂಗ್ ಕಾಂಪ್ಲೆಕ್ಸ್ ನ ಮಾರ್ಕೆಟ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವ ತರಕಾರಿ ಮತ್ತು ಇತರ ವ್ಯಾಪಾರಿಗಳು ತಮ್ಮ ಅಂಗಡಿಯಿಂದ ಅದೆಷ್ಟೋ ಫೀಟುಗಳಷ್ಟು ರಸ್ತೆಯನ್ನು ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿರುದರಿಂದ ಈ ರಸ್ತೆಯಲ್ಲಿ ಸಾಮಾನ್ಯ ಜನರಿಗೆ ಮತ್ತು ವಾಹನ ಸಾಗಾಟಕ್ಕೆ ಪರದಾಡಬೇಕಾಗುತ್ತದೆ ಮತ್ತು ಇದರಿಂದ ಅದೆಷ್ಟೋ ಸಾರ್ವಜನಿಕ ವಾಗ್ವಾದಗಳು ನಿತ್ಯ ಪ್ರಸಂಗವಾಗುತ್ತದೆ.
ಮೀನು ಮಾರಾಟಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿದ ಸುಸಜ್ಜಿತ ಕಟ್ಟಡವಿದ್ದರೂ, ವ್ಯಾಪಾರ ಮಾತ್ರ ನಡೆಯುವುದು ನಡು ರಸ್ತೆಯಲ್ಲಿ. ಮೀನು ಮಾರಾಟಗಾರರ ಕೆಲವು ಪ್ರಮುಖ ವ್ಯಕ್ತಿಗಳಿಗೂ ಕುಂಬಳೆ ಪಂಚಾಯತಿನ ಆಡಳಿತ ಪಕ್ಷಕ್ಕಿರುವ ಉತ್ತಮ ಸಂಬಂಧವೇ ಈ ಮೌನಸಮ್ಮತಿಗೆ ಪ್ರಮುಖ ಕಾರಣವೆಂದು ಪ್ರಜ್ಞಾವಂತ ಸಾರ್ವಜನಿಕರು ಆರೋಪಿಸುತ್ತಾರೆ.
ಮೀನು ಮಾರ್ಕೆಟ್ ಕುಂಬಳೆ ಸ್ಥಳೀಯಾಡಳಿತ ಕಚೇರಿ ಮತ್ತು ಪೊಲೀಸ್ ಠಾಣೆಯ ಕೆಲವೇ ಮೀಟರುಗಳಷ್ಟು ದೂರದಲ್ಲಿದ್ದರೂ ಈ ಎರಡು ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ "ಹುಲ್ಲು ಕಡ್ಡಿಯ" ಬೆಲೆ ಮಾತ್ರ ಕಲ್ಪಿಸಿ ವರ್ಷದ 365 ದಿನವೂ ವ್ಯಾಪಾರ ಭರ್ಜರಿಯಾಗಿ, ನಿರಂತರವಾಗಿ ನಡೆಯುತ್ತಲೇ ಇದೆ.
ಸರ್ವಾಜನಿಕ ಹಿತಕ್ಕಾಗಿ ಚುನಾಯಿತರಾದ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಾರ್ವಜನಿಕರು ವಿನಂತಿಸುತ್ತಾರೆ.