ಕನ್ನಡದಲ್ಲಿ ಸಂಕ್ರಾಂತಿ ಶುಭಾಶಯ ಕೋರಿದ ಪ್ರಧಾನಿ
ಸೊಲ್ಲಾಪುರ್: ಮೇಲ್ವರ್ಗದ ಬಡವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ಒದಗಿಸುವ ತಿದ್ದುಪಡಿ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಮೀಸಲಾತಿ ಹಾಗೂ ಪೌರತ್ವ ಮಸೂದೆಯಿಂದ ಸೌಲಭ್ಯ ವಂಚಿತರ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬಿಜೆಪಿ ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಯಶಸ್ವಿಯಾಗಿ ಅಂಗೀಕರಿಸುವ ಮೂಲಕ ಸುಳ್ಳು ಹೇಳುತ್ತಿರುವ ಪಕ್ಷಕ್ಕೆ ತಕ್ಕ ಉತ್ತರ ನೀಡಿದೆ ಎಂದರು.
ಮೇಲ್ವರ್ಗದ ಬಡವರ ಮೀಸಲಾತಿ ಮಸೂದೆ ಸೌಲಭ್ಯ ವಂಚಿತರನ್ನು ಮೇಲೆತ್ತಲು ಸಹಾಯ ಮಾಡಲಿದ್ದು, ಇದೊಂದು ಐತಿಹಾಸಿಕ ಮಸೂದೆ. ಇದರಿಂದ ದಲತಿ ಹಾಗೂ ಬುಡಕಟ್ಟು ಸೇರಿದಂತೆ ಇತರೆ ವರ್ಗದ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದರು.
ಇದೇ ವೇಳೆ ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ, ಮೈಕಲ್ ಮಾಮಾ ರಾಫೆಲ್ ಸ್ಪರ್ಧಿ ಕಂಪನಿಗಾಗಿ ಲಾಬಿ ಮಾಡುತ್ತಿದ್ದರು. ರಾಫೆಲ್ ಬಗ್ಗೆ ಸದ್ದು ಮಾಡುತ್ತಿರುವ ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಮೈಕಲ್ ಮಾಮಾ ಜೊತೆ ಕಾಂಗ್ರೆಸ್ ನ ಸಂಬಂಧವಾದರೂ ಎಂಥದು? ಅವರಿಗೆ ಉತ್ತರ ನೀಡಬಾರದೆ? ಚೌಕಿದಾರ ಅವರನ್ನು ಈ ಕುರಿತು ಪ್ರಶ್ನೆ ಕೇಳಬಾರದೆ? ಎಂದು ಪ್ರಶ್ನಿಸಿದರು.
ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಬಂಧಿತನಾಗಿರುವ ಇಂಗ್ಲೆಂಡ್ ಸಂಜಾತ ಕ್ರಿಶ್ಚಿಯನ್ ಮೈಕಲ್, ರಫೇಲ್ ಕಂಪನಿಯ ಸ್ಪರ್ಧಿ ಯೂರೋಫೈಟರ್ ಕಂಪನಿಗಾಗಿ ಲಾಬಿ ನಡೆಸಿದ್ದ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಮೋದಿ ಕಾಂಗ್ರೆಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕನ್ನಡದಲ್ಲಿ ಸಂಕ್ರಾಂತಿ ಶುಭಾಶಯ ಕೋರಿದ ಪ್ರಧಾನಿ!
'ಎಲ್ಲರಿಗೂ ಸಂಕ್ರಾಂತಿ, ಮಹಾರಾಷ್ಟ್ರ ಸಂಕ್ರಾಂತಿ ಹಬ್ಬದ ಶುಭಾಶಯಗಳು, ಎಲ್ಲರೂ ಎಳ್ಳು ಬೆಲ್ಲ ತಿಂದು ಒಳ್ಳೆ, ಸಿಹಿ ಮಾತನಾಡಿ' ಎಂದು ಕನ್ನಡದಲ್ಲಿ ಶುಭಾಶಯ ಕೋರಿದರು.
ಸೊಲ್ಲಾಪುರದಲ್ಲಿ ಅತಿ ಹೆಚ್ಚು ಕನ್ನಡಿಗರು ಇದ್ದಾರೆ ಎಂಬುದನ್ನು ತಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿಯೇ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.