ಬದಿಯಡ್ಕ: ಕನ್ನಡಿಗರು ತಮ್ಮತನವನ್ನು ಬಿಟ್ಟುಕೊಡಬಾರದು. ಮಲೆಯಾಳ ಭಾಷೆಯನ್ನು ಧ್ವೇಷಿಸಬಾರದು ಎಂಬುದು ನಿಜವಾದರೂ ಮಲೆಯಾಳ ಭಾಷೆ, ಸಂಸ್ಕøತಿಯನ್ನು ಅನುಕರಿಸಬಾರದು ಎಂದು ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಜೊತೆ ಕಾರ್ಯದರ್ಶಿ ಸತೀಶ್ ಸಾಲಿಯನ್ ನೆಲ್ಲಿಕುಂಜೆ ಹೇಳಿದರು.
ರಾಜ್ಯಪ್ರಶಸ್ತಿ ವಿಜೇತ ವಿಶ್ರಾಂತ ಅಧ್ಯಾಪಕ ಬಾಲಕೃಷ್ಣ ವೋರ್ಕೋಡ್ಲು ಅವರ ನಿವಾಸ ಎಡನೀರು ಗೋಕುಲ್ ಫಾಮ್ರ್ಸ್‍ನಲ್ಲಿ ಶನಿವಾರ ನಡೆದ ಸಿರಿಚಂದನ ಕನ್ನಡ ಯುವಬಳಗದ ಯಕ್ಷನುಡಿಸರಣಿ ಮನೆ ಮನೆ ಅಭಿಯಾನ-10 ಮತ್ತು ಕನ್ನಡ ಜಾಗೃತಿ ಉಪನ್ಯಾಸ ತಿಂಗಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ತುಳುವಿಗೆ ಹತ್ತಿರದ ನಂಟಿದೆ ಎಂದ ಅವರು ಮಲೆಯಾಳಿಗೆ ಕನ್ನಡ ಭಾಷೆಯನ್ನು ಕಲಿಸುವುದಕ್ಕಿಂತ ಮಿಗಿಲಾಗಿ ಅವರಿಗೆ ಕನ್ನಡಿಗರ ಸಮಸ್ಯೆಗಳ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ರಾಷ್ಟ್ರಪ್ರಶಸ್ತಿ ವಿಜೇತ ವಿಶ್ರಾಂತ ಅಧ್ಯಾಪಿಕೆ ಪುಷ್ಪಾವತಿ ಎಂ. ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯಕ್ಷ ನುಡಿಯೆನ್ನುವ ದೀಪದ ಪ್ರಕಾಶ ಮನೆಮನೆಯಲ್ಲಿ ಪ್ರಜ್ವಲಿಸಲಿ ಎಂದು ಹಾರೈಸುತ್ತಾ, ಎಳವೆಯಲ್ಲಿ ಯಕ್ಷಗಾನ ತಾಳಮದ್ದಳೆಗಳಲ್ಲಿ ಭಾಗವಹಿಸಿದ ನೆನಪುಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಶಿಧರ ಐಎಎಸ್ ಮಾತನಾಡಿ, ಇಂದಿಗೂ ಅಚ್ಚಗನ್ನಡ ಉಳಿದಿರುವುದಕ್ಕೆ ಯಕ್ಷಗಾನ ಬಯಲಾಟ, ಯಕ್ಷಗಾನ ತಾಳಮದ್ದಳೆಗಳು ಉದಾಹರಣೆಯಾಗಿವೆ. ಯುವತಲೆಮಾರು ಯಕ್ಷಗಾನದಲ್ಲಿ ಆಸಕ್ತಿ ತೋರಿಸುವುದರ ಬಗ್ಗೆ, ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸುವುದರ ಬಗ್ಗೆ ತನಗೆ ಹೆಮ್ಮೆ ಇದೆ ಎಂದ ಅವರು ಸಿರಿಚಂದನ ಕನ್ನಡ ಯುವಬಳಗದ ಕಾರ್ಯವೈಖರಿಗಳನ್ನು ಶ್ಲಾಘಿಸಿದರು.
ಸಿರಿಚಂದನ ಕನ್ನಡ ಯುವಬಳಗದ ಸದಸ್ಯೆ ಸುಜಾತ ಎನ್. ನಾರಂಪಾಡಿ ಕನ್ನಡ ಜಾಗೃತಿ ಉಪನ್ಯಾಸ ನೀಡಿ, ನಮ್ಮ ಮಾತೃಭಾಷೆಯಾದ ಕನ್ನಡವನ್ನು ನಾವು ಪ್ರೀತಿಸಬೇಕು. ಮಲೆಯಾಳಿಗಳೊಂದಿಗೆ ವ್ಯವಹರಿಸುವಾಗ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸಬೇಕು. ಆಗ ಅವರಿಗೂ ಕನ್ನಡ ಭಾಷೆ ತಿಳಿದಂತಾಗುತ್ತದೆ. ಕನ್ನಡ ಭಾಷೆಯ ಉಳಿವು ಕೂಡಾ ಸಾಧ್ಯವಾಗುತ್ತದೆ. ಕಾಸರಗೋಡು ಬಹುಭಾಷೆಗಳ ಸಂಗಮ ಭೂಮಿ, ಇಲ್ಲಿ ಕನ್ನಡ ಭಾಷೆ ಇಂದು ಕ್ಷೀಣಿಸುತ್ತಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಮಲೆಯಾಳಿ ಅಧ್ಯಾಪಕರ ನೇಮಕ ಆಗುತ್ತಿದೆ. ಕನ್ನಡಿಗರು ಸಕಾಲದಲ್ಲಿ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದರು. ಕುಣಿಕುಳ್ಳಾಯ, ಮಹಾಬಲ ಭಂಡಾರಿ ಮುಂತಾದ ಹಿರಿಯರು ಕನ್ನಡಿಗರಿಗಾಗಿ ದೊರಕಿಸಿಕೊಟ್ಟ ಸವಲತ್ತುಗಳನ್ನು ಇಂದು ಮಲೆಯಾಳಿಗರು ಅನುಭವಿಸುತ್ತಿದ್ದಾರೆ, ಅದಕ್ಕೆ ಅವಕಾಶ ಮಾಡಿಕೊಡದೆ ನಾವು ನಮ್ಮತನವನ್ನು ಉಳಿಸಬೇಕಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ಲವೀನ ಪ್ರೀತಿ ಕ್ರಾಸ್ತ ಮಾತನಾಡಿ, ಯಕ್ಷನುಡಿಸರಣಿ ಅಭಿಯಾನದ ಮೂಲಕ ಒಂದು ಪ್ರದೇಶದ ಕನ್ನಡಿಗರನ್ನು ಒಟ್ಟುಗೂಡಿಸಿ ಅವರಿಗೆ ಕನ್ನಡ ಭಾಷೆ, ಸಂಸ್ಕøತಿಯ ಉಳಿವಿನ ಅಗತ್ಯ, ಕನ್ನಡ ಭಾಷಾ ಅಲ್ಪಸಂಖ್ಯಾತರಿಗಿರುವ ಸಂವಿಧಾನಬದ್ಧ ಹಕ್ಕು, ಕನ್ನಡಿಗರ ಸಮಸ್ಯೆಗಳು, ಕಾಸರಗೋಡಿನಲ್ಲಿ ಕನ್ನಡದ ಮಹತ್ವ ಮೊದಲಾದವುಗಳ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಮೊದಲಾದವುಗಳ ಮೂಲಕ ಬರುವ ಕನ್ನಡದ ಕುರಿತಾ ತಪ್ಪು ಮಾಹಿತಿಗಳನ್ನು, ಸುಳ್ಳು ಪ್ರಚಾರಗಳನ್ನು ನಂಬದೆ ನಿಜಾಂಶ ಏನು ಎಂಬುದನ್ನು ತಿಳಿದುಕೊಳ್ಳಲು ಕನ್ನಡ ಜಾಗೃತಿ ಉಪನ್ಯಾಸಗಳ ಮೂಲಕ ಸಾಧ್ಯವಾಗುತ್ತಿದೆ. ಕಾಸರಗೋಡಿನಲ್ಲಿ ಕನ್ನಡಾಭಿಮಾನ ಕ್ಷೀಣಿಸಿಲ್ಲ ಎಂಬುದಕ್ಕೆ ಯಕ್ಷನುಡಿಸರಣಿ ಮನೆ ಮನೆ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಕನ್ನಡಾಭಿಮಾನಿಗಳೇ ಸಾಕ್ಷಿ ಎಂದರು.
ಯುವಬಳಗದ ಮಾರ್ಗದರ್ಶಕ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜ್ಯ ಪ್ರಶಸ್ತಿ ವಿಜೇತ ವಿಶ್ರಾಂತ ಅಧ್ಯಾಪಕ ಬಾಲಕೃಷ್ಣ ವೋರ್ಕೂಡ್ಲು ಸ್ವಾಗತಿಸಿ, ಚೆಂಗಳ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷೆ ಶಾಂತಕುಮಾರಿ ವಂದಿಸಿದರು. ಎಡನೀರು ಶಾಲೆಯ ವಿದ್ಯಾರ್ಥಿಗಳಾದ ಕು.ಶ್ರೀನಂದ, ವೈಷ್ಣವಿ ಹಾಗೂ ಶ್ರೀಕೃಷ್ಣಾ ಪ್ರಾರ್ಥನೆ ಹಾಡಿದರು. ಸಿರಿಚಂದನ ಕನ್ನಡ ಯುವಬಳಗದ ಸದಸ್ಯೆ ಸವಿತಾ ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರು ದಿವಾಣ ಶಿವಶಂಕರ ಭಟ್ ಹಾಗೂ ಡಾ.ರತ್ನಾಕರ ಮಲ್ಲಮೂಲೆ ಅವರ ಮಾರ್ಗದರ್ಶನದಲ್ಲಿ ಬಳಗದ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ದೇವಿದಾಸ ವಿರಚಿತ 'ವಿದುರಾಥಿತ್ಯ' ಹಾಗೂ 'ಕರ್ಣಭೇೀದನ'À ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವೆಂಕಟ್ರಾಜ ಕೆ.ಯಂ ಕುಂಟಿಕಾನ ಮಠ, ಚೆಂಡೆ ಮತ್ತು ಮದ್ದಳೆಯಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾಯಿ ಹಾಗೂ ಬೇಂಗ್ರೋಡಿ ಲಕ್ಷ್ಮೀಶ ಸಹಕರಿಸಿದರು. ಮುಮ್ಮೇಳದಲ್ಲಿ ವಿದುರನಾಗಿ ರಾಜಾರಾಮ ಮಧ್ಯಸ್ಥ ಕುಂಜಾರು, ಕೃಷ್ಣನಾಗಿ ದಿವಾಕರ ಬಲ್ಲಾಳ ಎ.ಬಿ, ಶಶಿಧರ ಕುದಿಂಗಿಲ, ಕರ್ಣನ ಪಾತ್ರದಲ್ಲಿ ನವೀನ ಕುಂಟಾರು, ಕುಂತಿಯಾಗಿ ಕಾರ್ತಿಕ್ ಪಡ್ರೆ, ಸೂರ್ಯನ ಪಾತ್ರದಲ್ಲಿ ಪ್ರದೀಪ ಎಡನೀರು ಸಹಕರಿಸಿದರು. ಬಳಗದ ಸದಸ್ಯ ದಿವಾಕರ ಬಲ್ಲಾಳ ಎ.ಬಿ ಕಲಾವಿದರ ಪರಿಚಯ ಮಾಡಿದರು. ಪ್ರದೀಪ್ ಕುಮಾರ್ ಎಡನೀರು ವಂದಿಸಿದರು. ಇತ್ತೀಚೆಗಷ್ಟೆ ಪಾಂಡಿಯಲ್ಲಿ ನೇಮಕಾತಿ ಪಡೆದ ಬಳಗದ ಕಲಾವಿದ ಮಣಿಕಂಠ ಪಾಂಡಿಬಯಲು ಹಾಗೂ ಯು.ಜಿ.ಸಿ ನೆಟ್ ತೇರ್ಗಡೆಯಾದ ಬಳಗದ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.