HEALTH TIPS

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ತೆರೆ-ಠರಾವು ಮಂಡನೆ

     
         ಬದಿಯಡ್ಕ:   ಗಡಿನಾಡಿನ ಸಾಹಿತ್ಯ ಸಮ್ಮೇಳನವು ಇತರೆಡೆಗಳ ಸಮ್ಮೇಳನಗಳಿಗಿಂತ ವಿಭಿನ್ನವಾಗಿ ಮಹತ್ವ ಪಡೆದಿದೆ. ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಕೊಡಮಾಡಿರುವ್ ಸವಲತ್ತುಗಳಿಗೆ ಕೊರತೆಯಿಲ್ಲ. ಆದರೆ ಅವುಗಳ ಕಸಿಯುವ ಯತ್ನಗಳಿಂದಾಗಿ ತೊಡಕುಗಳು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗೃತಿ-ಒಗ್ಗಟ್ಟಿನ ಶಕ್ತಿಯಾಗಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ, ಭಾಷಾ ಶಾಸ್ತ್ರ ವಿದ್ವಾಂಸ, 12ನೇ ಗಡಿನಾಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಪಿ.ಶ್ರೀಕೃಷ್ಣ ಭಟ್ ತಿಳಿಸಿದರು.
       ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶನಿವಾರ ಹಾಗೂ ಭಾನುವಾರ ನಡೆದ  ಗಡಿನಾಡ ಜಿಲ್ಲಾ 12ನೇ ಸಾಹಿತ್ಯ  ಸಮ್ಮೇಳನದ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.
    ಜಿಲ್ಲೆಯ ಕನ್ನಡಿಗರ ಹಕ್ಕನ್ನು ಯತ್ನಗಳು ರಾಜ್ಯದ ದಕ್ಷಿಣದ ಜಿಲ್ಲೆಗಳಿಂದ ಅಧಿಕಾರಿಗಳಾಗಿ ಬರುವವರಿಮದ ವ್ಯಾಪಕವಾಗಿ ನಡೆಯುತ್ತಿದೆ. ಸರಕಾರ ಗಡಿನಾಡ ಸಂರಕ್ಷಣೆಗಳಿಗಾಗಿ ಒದಗಿಸಿರುವ ಸವಲತ್ತುಗಳಿಗೆ ಒದಗುವ ಇಂತಹ ಕುತ್ಸಿತ ಮನೋಸ್ಥಿತಿಗಳನ್ನು ಹತೋಟಿಗೆ ತರುವಲ್ಲಿ ಕನ್ನಡಿಗರು ಒಗ್ಗಟ್ಟಾಗಬೇಕು ಎಂದು ತಿಳಿಸಿದರು. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಮುನ್ನಡೆದಿದ್ದು, ಸಮ್ಮೇಳನದಲ್ಲಿ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂಬ ದೂರುಗಳಿವೆ. ಆದರೆ ಇಲ್ಲಿಯ ಕೃಷಿಕರು, ವ್ಯಾಪಾರಿಗಳು, ಇತರ ವಿಭಾಗಗಳ ಜನಸಾಮಾನ್ಯರಿಗೂ ಕನ್ನಡ ಭಾಷೆಯ ಅಗತ್ಯ ಇದೆ ಎಂಬ ಗಂಭೀರತೆಯನ್ನು ಮರೆಮಾಚಬಾರದು.ಎಲ್ಲರಿಗೂ, ಎಲ್ಲೆಡೆ ಕನ್ನಡ ಎಂಬ ಭಾವ ಜಾಗೃತವಾಗಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಅವರು ತಿಳಿಸಿದರು.
        ಬೇಳ ಶೋಕಮಾತಾ ದೇವಾಲಯದ ಧರ್ಮಗುರು ಫಾದರ್ ಜೋನ್ ವಾಸ್, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಮಜಾನ ವಿದ್ಯಾಸಂಸ್ಥೆಗಳ ಪ್ರಬಂಧಕ, ಸಮ್ಮೇಳನ ಕಾರ್ಯಧ್ಯಕ್ಷ ಜಯದೇವ ಖಂಡಿಗೆ, ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ ರೈ, ಗ್ರಾ.ಪಂ. ಸದಸ್ಯ ಶಂಕರ ಡಿ., ಕಸಾಪ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದು ಮಾತನಾಡಿದರು.
    ಸಮಾರಂಭದಲ್ಲಿ  ವಿವಿಧ ವಲಯಗಳ  ಹಿರಿಯ ಸಾಧಕರಾದ ಎಂ.ಶಂಕರ ನಂಬಿಯಾರ್( ಶಿಕ್ಷಣ), ಐ.ವಿ.ಭಟ್(ಕನ್ನಡ ಹೋರಾಟ), ಕೃಷ್ಣ ಭಟ್ ಜೇನುಮೂಲೆ(ಸಂಗೀತ), ಶೇಡಿಗುಮ್ಮೆ ವಾಸುದೇವ ಭಟ್(ಯಕ್ಷಗಾನ), ಪ್ರೇಮಾ ಭಟ್ ತೊಟ್ಟೆತ್ತೋಡಿ(ಸಮಾಜ ಸೇವೆ), ರಾಧಾಕೃಷ್ಣ ಕೆ ಉಳಿಯತ್ತಡ್ಕ(ಸಾಹಿತ್ಯ)  ಅವರನ್ನು ಸಮ್ಮೇಳನದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯ ಅವರು 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಠರಾವು ಮಂಡಿಸಿದರು. ಅವರು ಈ ಸಂದರ್ಭ ಮಾತನಾಡಿ ಗಡಿನಾಡಿನ ಕನ್ನಡ ಅಸ್ಮಿತೆತೆ ದಿನನಿತ್ಯ ಹೊಸ ಸವಾಲುಗಳು ಎದುರಾಗುತ್ತಿದ್ದು, ಕನ್ನಡಿಗರು ತಮ್ಮ ಸಾಂವಿಧಾನಿಕ ಹಕ್ಕಿಗಾಗಿ ಚಳವಳಿಯ ಹಾದಿ ಹಿಡಿಯುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
     ಠರಾವಿನ ಮುಖ್ಯಾಂಶಗಳು:
               ಮಹಾಜನ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು, ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದಂತೆ ಕೇರಳ ಸರಕಾರವು ನಿಜಾರ್ಥದಲ್ಲಿ ತನ್ನ ಬದ್ದತೆ ತೋರಿಸಬೇಕು, ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಲೆಯಾಳ ಭಾಷೆಯನ್ನು ಒಂದು ಭಾಷೆಯಾಗಿ ಕಲಿಯಬೇಕೆಂಬ ಕಾನೂನನ್ನು ಶೀಘ್ರ ಹಿಂಪಡೆಯಬೇಕು, ಕೇರಳ ಸರಕಾರ ಯಾವುದೇ ಕಾನೂನು ನಿಯಮಗಳನ್ನು ರೂಪಿಸುವಾಗ ಭಾಷಾ ಅಲ್ಪಸಂಖ್ಯಾತÀರಿಗೆ ಕೊಡಮಾಡಿದ ಸವಲತ್ತುಗಳಿಗೆ ಚ್ಯುತಿ ಬಾರದಂತೆ ನಿಗಾ ವಹಿಸಬೇಕು, ಕಾಸರಗೋಡು ಮತ್ತು ಮಂಜೇಶ್ವರ ವಿಧಾನ ಸಭಾ ಕ್ಷೇತ್ರಗಳನ್ನು ಕನ್ನಡ  ಭಾಷಾ ಅಲ್ಪಸಂಖ್ಯಾತರಿಗೇ ಮೀಸಲಿರುವ ಬಗ್ಗೆ ಕಾನೂನು ರಚಿಸಬೇಕು, ಕಾಸರಗೋಡು ಪ್ರದೇಶದಲ್ಲಿ ಸರಕಾರದಿಂದ ಕಳಿಸಲ್ಪಡುವ ಯಾವುದೇ ಆದೇಶ, ಸುತ್ತೋಲೆಗಳು ಕನ್ನಡದಲ್ಲಿಯೂ ಇರುವಂತೆ ಎಲ್ಲಾ ಸರಕಾರಿ ಕಚೇರಿಗಳಿಗೆ ಸುತ್ತೋಲೆ ಕಳಿಸಬೇಕು, ಕಾಸರಗೋಡಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳನ್ನು ನೇಮಿಸಬೇಕು, ಕಾಸರಗೋಡು ಜಿಲ್ಲೆಯ ಸ್ಥಳ ನಾಮಗಳು ಕನ್ನಡದಲ್ಲೇ ಇರಲು ಅಗತ್ಯ ಕ್ರಮ ಜಾರಿಗೊಳಿಸಬೇಕು ಎಂಬ ಬೇಡಿಕೆಯ ಠರಾವು ಮಂಡಿಸಲಾಯಿತು.
   ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ನರಹರಿ ಪಿ. ಕಳತ್ತೂರು ಸ್ವಾಗತಿಸಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಸುಂದರ ಬಾರಡ್ಕ ವಮದಿಸಿದರು. ಸನ್ಮಾನ ಸಮಿತಿ ಉಪಾಧ್ಯಕ್ಷ ಯತೀಶ್ ಕುಮಾರ್ ರೈ ವಂದಿಸಿದರು.
     ಬಳಿಕ  ಅಗಲ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ ಮುರಾಸುರ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯುವುದರೊಂದಿಗೆ ಗಡಿನಾಡ ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನ ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries