ಬದಿಯಡ್ಕ: ಪೆರಡಾಲ ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ಫಿಸಿಕಲ್ ಸೈನ್ಸ್ ಹುದ್ದೆಗೆ ಮಲಯಾಳೀ ಅಧ್ಯಾಪಕನನ್ನು ನೇಮಿಸಲು ಆದೇಶಿಸಿದ ಸರಕಾರದ ನಿರ್ಧಾರವು ಖಂಡನೀಯವಾಗಿದೆ ಎಂದು ಬಿಜೆಪಿ ಬದಿಯಡ್ಕ ಪಂಚಾಯತಿ ಸಮಿತಿ ತಿಳಿಸಿದೆ.
ಕನ್ನಡ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುವ ಸರಕಾರವು ತನ್ನ ಮಲತಾಯಿ ಧೋರಣೆಯಿಂದ ಹಿಂದೆ ಸರಿಯಬೇಕು. ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡದಲ್ಲೇ ಕಲಿತಿರುವ ಶಿಕ್ಷಕರನ್ನೇ ನೇಮಿಸಬೇಕು. ಆರ್ಥಿಕವಾಗಿ ಹಿಂದುಳಿದ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ಮಕ್ಕಳೇ ಹೆಚ್ಚಾಗಿ ಅವಲಂಬಿಸುರುವ ಈ ಶಾಲೆಯ ಮಕ್ಕಳ ಭವಿಷ್ಯದ ಮೇಲೆ ಸರಕಾರವು ಚೆಲ್ಲಾಟವಾಡಬಾರದು. ಮಲಯಾಳ ಶಿಕ್ಷಕನ ನೇಮಕವನ್ನು ಕೂಡಲೇ ರದ್ದುಗೊಳಿಸಿ, ಕನ್ನಡ ಶಿಕ್ಷಕನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿ ಕಾಸರಗೋಡಿನ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಆಳುವ ಸರಕಾರ ಮತ್ತೆ ಮತ್ತೆ ಗಧಾಪ್ರಹಾರಗಳ ಮೂಲಕ ಸಾಂವಿಧಾನಿಕ ಹಕ್ಕನ್ನು ಚ್ಯುತಿಗೊಳಿಸಲು ಪ್ರಯತ್ನಿಸುತ್ತಿದೆ. ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡದ ಗಂಧಗಾಳಿ ತಿಳಿಯದ ಶಿಕ್ಷಕರನ್ನು ನೇಮಿಸುವ ಯತ್ನ ಹಿಂದೆ ಸರಿಯದಿದ್ದಲ್ಲಿ ಬಿಜೆಪಿ ತೀವ್ರ ಹೋರಾಟವನ್ನು ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಿಜೆಪಿ ಪಂಚಾಯತಿ ಸಮಿತಿ ತುರ್ತು ಸಭೆ ನಡೆಸಿ ಸರಕಾರದ ಕನ್ನಡ ಧಮನ ನೀತಿಯನ್ನು ಕಟುವಾಗಿ ಖಂಡಿಸಿದೆ. ಪಂಚಾಯತಿ ಸಮಿತಿ ಅಧ್ಯಕ್ಷ ಕರಿಂಬಿಲ ವಿಶ್ವನಾಥ ಪ್ರಭು ಅಧ್ಯಕ್ಷತೆಯನ್ನು ವಹಿಸಿದ್ದರು. ನೇತಾರರಾದ ಬಾಲಕೃಷ್ಣ ಶೆಟ್ಟಿ ಕಡಾರು, ಅವಿನಾಶ್ ರೈ, ಡಿ.ಶಂಕರ, ಲಕ್ಷ್ಮೀನಾರಾಯಣ ಪೈ, ಕೃಷ್ಣ ಮಣಿಯಾಣಿ ಮೊಳೆಯಾರು, ಎಂ. ನಾರಾಯಣ ಭಟ್, ನ್ಯಾಯವಾದಿ ಬಿ. ಗಣೇಶ್, ವಿಜಯಸಾಯಿ ಮೊದಲಾದವರು ಉಪಸ್ಥಿತರಿದ್ದರು.