ಮುಂಬೈ: ಮಕ್ಕಳ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಹಲವಾರು ವರ್ಷಗಳ ಕಾಲ ಏಕಸ್ವಾಮ್ಯ ಮೆರೆದಿದ್ದ "ಚಂದಮಾಮ" ಗೆ ಈಗ ಸಂಕಷ್ಟ ಎದುರಾಗಿದೆ. ಮಕ್ಕಳ ಪತ್ರಿಕೆ "ಚಂದಮಾಮ" ಬೌದ್ದಿಕ ಹಕ್ಕುಗಳನ್ನು ಮಾರಾಟ ಮಾಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
"ಚಂದಮಾಮ" ಪತ್ರಿಕೆ ನಡೆಸುತ್ತಿದ್ದ ಜಿಯೋಡೆಸಿಕ್ ಲಿ. ಸಂಸ್ಥೆಯ ಮಾಲೀಕರು ಈಗ ಆರ್ಥಿಕ ಅಪರಾಧ ಪ್ರಕರಣದಲ್ಲಿ ಸಿಕ್ಕು ಜೈಕುಪಾಲಾಗಿದ್ದಾರೆ. ಆದರೆ ಸಂಸ್ಥೆ "ಚಂದಮಾಮ" ಪತ್ರಿಕೆ ಮಾಡಲು ಯಾವುದೇ ಅಡ್ಡಿ ಇಲ್ಲ.ಈ ಕಾರಣದಿಂದ ಸಂಸ್ಥೆಯ ನಿರ್ದೇಶಕರು ನ್ಯಾಯಾಲಯಕ್ಕೆ ಹಾಜರಾಗಿ ಸಂಸ್ಥೆಯ ಸ್ವತ್ತುಗಳನ್ನು ಮಾರಾಟ ಮಾಡಲು ಯಾವುದೇ ಷರತ್ತಿಲ್ಲದೆ ಸಮ್ಮತಿ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ. ಕಥವಾಲಾ ಅವರಿದ್ದ ಪೀಠ ಈ ತೀರ್ಪು ನೀಡಿದ್ದು ಜಿಯೋಡೆಸಿಕ್ ಲಿ. ಸಂಸ್ಥೆಯ ಮೂವರು ನಿರ್ದೇಶಕರಾದ ಕಿರಣ್ ಪ್ರಕಾಶ್ ಕುಲಕರ್ಣಿ, ಪ್ರಶಾಂತ್ ಮುಲೇಕರ್ ಹಾಗೂ ಸಂಸ್ಥೆಯ ಸಿಎ ದಿನೇಶ್ ಜಜೋಡಿಯಾ ಜೈಲುಪಾಲಾಗಿದ್ದಾರೆ.
2002ರಲ್ಲಿ ಜಾರಿ ನಿರ್ದೇಶನಾಲಯವು ಸಂಸ್ಥೆಗೆ ಸೇರಿದ್ದ 16 ಕೋಟಿ ರು. ಸ್ಥಿರಾಸ್ತಿಯನ್ನು ವಶಕ್ಕೆ ಪಡೆದಿತ್ತು.ಇದನ್ನು ಮಾರಾಟ ಮಾಡುವುದಕ್ಕೆ ಬಾಂಬೆ ಹೈಕೋರ್ಟ್ ಆದೇಶಿಸಿದ್ದು ಮೂಲದ ಪ್ರಕಾರ "ಚಂದಮಾಮ" ಪತ್ರಿಕೆ ಮಾತ್ರವೇ 25 ಕೋಟಿ ರು. ಬೆಲೆ ಬಾಳುತ್ತದೆ.
ಭಾರತ ಸ್ವಾತಂತ್ರ ಗಳಿಸುವುದಕ್ಕೆ ಮುನ್ನ ನಾಗಿರೆಡ್ಡಿ ಹಾಗೂ ಚಕ್ರಪಾಣಿ ಎಂಬ ಇಬ್ಬರು ತೆಲುಗು ಹಾಗೂ ತಮಿಳು ಭಾಷೆಯಲ್ಲಿ "ಚಂದಮಾಮ" ಪತ್ರಿಕೆ ಪ್ರಕಟಣೆಗೆ ಪ್ರಾರಂಭಿಸಿದ್ದರು.90ರ ದಶಕದಲ್ಲಿ ದೇಶಾದ್ಯಂತ ಮನೆಮಾತಾಗಿದ್ದ ಪತ್ರಿಕೆ ಸಿಂಧಿ, ಸಂಸ್ಕೃತ ಸೇರಿ ದೇಶದ 13 ಭಾಷೆಗಳಲ್ಲಿ ಪ್ರಕಟವಾಗುತ್ತಿತ್ತು. 2007ರಲ್ಲಿ "ಚಂದಮಾಮ" ಪತ್ರಿಕೆಯ ಶೇ. 94ರಷ್ಟು ಶೇರುಗಳನ್ನು ರು.10.2 ಕೋಟಿ ನೀಡಿ ಜಿಯೋಡೆಸಿಕ್ ಲಿ. ಸಂಸ್ಥೆ ಖರೀದಿಸಿದೆ.ಆ ವೇಳೆ ಪತ್ರಿಕೆ ಪ್ರಸರಣಾ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು ಜಾಹೀರಾತು ಆದಾಯ ಸಹ ಕುಸಿದಿತ್ತು. ಇದಾಗಿ ಜಿಯೋಡೆಸಿಕ್ ;ಲಿ 2014ರ ವೇಳೆಗೆ ದಿವಾಳಿತನ ಘೋಷಣೆ ಮಾಡಿ ಬಾಗಿಲು ಮುಚ್ಚಿತ್ತು. ಇದೀಗ ತೆರಿಗೆ ವಂಚನೆ ಪ್ರಕರಣ ಸೇರಿ ವಿವಿಧ ಪ್ರಕರಣಗಳಡಿ ಸಂಸ್ಥೆಯ ಮುಖ್ಯಸ್ಥರು ಆರೋಪಿಯಾಗಿದ್ದು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.