ಕಾಸರಗೋಡು: ಹಿಂದೂ ಸಮಾಜೋತ್ಸವದ ಶ್ರೇಷ್ಠ ಸಂದೇಶಗಳನ್ನು, ಆದರ್ಶಯುತ ಮಾತುಗಳನ್ನು ನಮ್ಮ ನಿತ್ಯ ಜೀವನದಲ್ಲಿ ದೈನಂದಿನವಾಗಿ ಪಾಲಿಸಬೇಕೆಂದು ಚಿನ್ಮಯ ಮಿಷನ್‍ನ ಕೇರಳ ವಲಯದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ತಿಳಿಸಿದರು.
ಡಿಸೆಂಬರ್ 16ರಂದು ವಿದ್ಯಾನಗರದಲ್ಲಿ ಜರಗಿದ ಹಿಂದೂ ಸಮಾಜೋತ್ಸವವು ಮರೆಯಲಾಗದ ಯಶಸ್ವೀ ಕಾರ್ಯಕ್ರಮವಾಗಿ ನಡೆದಿದೆ ಎಂದು ಉತ್ಸವ ಸಂಘಟನಾ ಸಮಿತಿಯ ರಕ್ಷಾಧಿಕಾರಿಯೂ ಆದ ಸ್ವಾಮೀಜಿ ನುಡಿದರು.
ಕಾರ್ಯಕ್ರಮದ ಅವಲೋಕನ ಹಾಗೂ ಸಂಘಟನಾ ಸಮಿತಿಯ ವಿಸರ್ಜನೆಗಾಗಿ ಕಾಸರಗೋಡಿನಲ್ಲಿ ಇತ್ತೀಚೆಗೆ ಜರಗಿದ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜೋತ್ಸವದಂದು ಲಭಿಸಿದ ಅನುಭವ, ಸಂದೇಶಗಳನ್ನು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಜಾಗೃತ ಹಿಂದೂ ಸಮಾಜ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಸ್ವಾಮೀಜಿ ತಿಳಿಸಿದರು.
ಸಮಾಜೋತ್ಸವವನ್ನು ಮಾದರಿ ರೀತಿಯಲ್ಲಿ ನಡೆಸಿ ಯಶಸ್ವಿಗೊಳಿಸಲು ಪ್ರಯತ್ನಿಸಿದ ಸಂಘಟನಾ ಸಮಿತಿಯ ಸದಸ್ಯರು, ಕಾರ್ಯಕರ್ತರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದ ಸರ್ವರಿಗೂ ಸಭೆಯು ಅಭಿನಂದನೆಗಳನ್ನು ಸಲ್ಲಿಸಿದೆ.
ಉತ್ಸವ ಸಂಘಟನಾ ಸಮಿತಿಯ ಅಧ್ಯಕ್ಷ ಕೆ.ಶಶಿಧರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಶೋಕ ಬಾಡೂರು, ಕೋಶಾಧಿಕಾರಿ ಐತ್ತಪ್ಪ ಮವ್ವಾರು, ಗಣೇಶ್ ಪಾರೆಕಟ್ಟೆ , ಎಂ.ಕೆ.ಅಶೋಕ್‍ಕುಮಾರ್ ಹೊಳ್ಳ, ಕಾರ್ಯಕ್ರಮ ಸಂಯೋಜಕ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ, ಟಿ.ವಿ.ಭಾಸ್ಕರ ಮೊದಲಾದವರು ಮಾತನಾಡಿದರು.