ಕಾಸರಗೋಡು: ಪರಿಸರ ಸಂರಕ್ಷಣೆ ಸಂಬಂಧ ಹರಿತ ಕೇರಳ ಮಿಷನ್‍ನ `ತ್ಯಾಜ್ಯದಿಂದ ಸ್ವಾತಂತ್ರ' ಎಂಬ ಯೋಜನೆಯ 2ನೇ ಹಂತದ ಹರಿತ ನಿಯಮಾವಳಿ ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆ ಜ.26ರಂದು ನಡೆಯಲಿದೆ.
ಜಲಾಶಯಗಳಲ್ಲಿ ತ್ಯಾಜ್ಯ ಬಿಸುಟುವುದನ್ನು ತಡೆಯುವುದು, ಜಲಾಶಯಗಳ ಸಂರಕ್ಷಣೆ, ಸಂರಕ್ಷಿತ ಬಳಕೆ ಇತ್ಯಾದಿಗಳನ್ನು ಖಚಿತಪಡಿಸುವ ಮೂಲಕ ಮಿಷನ್‍ನ ಚಟುವಟಿಕೆಗಳು ನಡೆಯಲಿವೆ. ಮಣ್ಣು, ನೀರು, ವಾಯುವನ್ನು ಕಲುಷಿತಗೊಳಿಸದೇ ಶುದ್ಧವಾಗಿರಿಸುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜಲಾಶಯಗಳಲ್ಲಿ ಸದಾ ನೀರು ಸಮೃದ್ಧವಾಗಿರುವಂಥಾ ಪ್ರಕೃತಿಗೆ ಪೂರಕವಾದ ವ್ಯವಸ್ಥೆಗಳನ್ನು ಏರ್ಪಡಿಸುವುದು, ವಿವಿಧ ಇಲಾಖೆಗಳ, ಸ್ಥಳೀಯಾಡಳಿತೆ ಸಂಸ್ಥೆಗಳ ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ವಿವಿಧ ಚಟುವಟಿಕೆ ನಡೆಸುವ, ಜನಜಾಗೃತಿ, ತ್ಯಾಜ್ಯ ಪರಿಷ್ಕರಣೆ ಇತ್ಯಾದಿಗಳು ಮಿಷನ್‍ನ ಪ್ರಧಾನ ಉದ್ದೇಶಗಳಾಗಿವೆ. ಇದರ ಅಂಗವಾಗಿಯೇ ಅಭಿಯಾನ ನಡೆಯಲಿದೆ.
ಜಲ ಮಲಿನೀಕರಣ ವಿರುದ್ಧ ಕಾನೂನು, ವಾಯು ಮಲಿನೀಕರಣ ವಿರುದ್ಧ ಕಾನೂನು, ಪರಿಸರ ಮಲಿನೀಕರಣ ವಿರುದ್ಧ ಕಾನೂನು, ಕೇರಳ ಪಂಚಾಯತ್ ರಾಜ್ ಕಾನೂನು, ಕೇರಳ ಜಲಾಶಯ ಕಾನೂನು, ಆಹಾರ ಸುರಕ್ಷಾ ಕಾನೂನು, ರಾಷ್ಟ್ರೀಯ ಹರಿತ ಟ್ರ್ಯಬ್ಯೂನಲ್ ಕಾಯಿದೆ, ಇಂಡಿಯನ್ ಪೀನಲ್ ಕೋಡ್, ಕೇರಳ ಪೆÇಲೀಸ್ ಕಾಯಿದೆ ಮತ್ತು ಸಂಬಂಧಿತ ಸಂಹಿತೆಗಳು ತಿಳಿಸುವ ಕ್ರಮಗಳನ್ನು ಕಡ್ಡಾಯಗೊಳಿಸಿದರೆ ಮಾತ್ರ ಮಿಷನ್ ಉದ್ದೇಶಿಸಿರುವ ಗುರಿಗಳನ್ನು ಸಾಧಿಸಬಹುದಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಸಿಬ್ಬಂದಿಗೆ, ಜನಪ್ರತಿನಿಧಿಗಳಿಗೆ ಈ ಸಂಬಂಧ ಸವಿಸ್ತಾರ ತರಬೇತಿ ನೀಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಅವರನ್ನು ಸಬಲರನ್ನಾಗಿಸುವ ನಿಟ್ಟಿನಲ್ಲಿ ಹರಿತ ನಿಯಮಾವಳಿ ಕಾರ್ಯಕ್ರಮ ಪೂರಕವಾಗಲಿದೆ.
ಬೆಳಿಗ್ಗೆ 11 ಗಂಟೆಗೆ ನಗರಸಭೆಯ ವನಿತಾ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಬೆ ಉಪಾಧ್ಯಕ್ಷ ಎನ್.ಎ.ಮಹಮ್ಮದ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪಧಾನ ಭಾಷಣ ಮಾಡುವರು.
ಹರಿತ ಕೇರಳ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಹರಿತ ನಿಯಮಾವಳಿ-ಹೊತ್ತೆಗೆಯ ಬಗ್ಗೆ ಮಾಹಿತಿ ನೀಡುವರು. ಪಂಚಾಯತ್ ಸಹಾಯಕ ನಿರ್ದೇಶಕ ಟಿ.ಜೆ.ಅರುಣ್, ಮಲಿನೀಕರಣ ನಿಯಂತ್ರಣ ಮಂಡಳಿ ಎ.ಇ.ಸನಿಲ್ ಕಾರಾಟ್, ಕಾಸರಗೋಡು ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ರಾಜಾರಾಂ, ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಶುಚಿತ್ವ ಮಿಷನ್ ಸಂಚಾಲಕ ಸಿ.ರಾಧಾಕೃಷ್ಣನ್, ಕಾಸರಗೋಡು ನಗರಸಭೆ ಕಾರ್ಯದರ್ಶಿ ವಿ.ಸಜಿ ಕುಮಾರ್ ಉಪಸ್ಥಿತರಿರುವರು.