ಬದಿಯಡ್ಕ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಇದೇ ಜ.19ರಿಂದ 2 ದಿನಗಳ ಕಾಲ ನೀರ್ಚಾಲಿನ ಮಹಾಜನ ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾಸರಗೋಡು ಹಾಗೂ ಕರ್ನಾಟಕದ ಅನೇಕ ಕನ್ನಡ ಪುಸ್ತಕ ಮಳಿಗೆಗಳು ಭಾಗವಹಿಸಲಿವೆ. ಈ ಸಮ್ಮೇಳನದಲ್ಲಿ ಮಕ್ಕಳ ಬೌದ್ಧಿಕ ವಿಕಸನಕ್ಕೆ ಪೂರಕವಾಗುವ ಪುಸ್ತಕಗಳು, ಅನೇಕ ಸಂಶೋಧಕರ ವಿಚಾರಯುತ ಪುಸ್ತಕಗಳು, ನಾಡಿನ ವಿವಿಧ ಆಚರಣೆಗಳು, ಜನಜೀವನ, ಇತಿಹಾಸಗಳ ಬಗ್ಗೆ ಬೆಳಕು ಚೆಲ್ಲುವ ಕೃತಿಗಳು, ದಾಸವರೇಣ್ಯರ ಕೀರ್ತನೆಗಳ ಕುರಿತ ಪುಸ್ತಕಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿದೆ. ಈ ಸಮ್ಮೇಳನದಲ್ಲಿ ಉಡುಪಿಯ ಸುರಭಿ ಪುಸ್ತಕ ಮಳಿಗೆ, ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆ, ಮಂಗಳೂರಿನ ಅರುಣೋದಯ ಪ್ರಕಾಶನ ಮೊದಲಾದ ಸಂಸ್ಥೆಗಳು ಮಳಿಗೆಗಳನ್ನು ತೆರೆಯಲಿವೆ. ಸಾಹಿತ್ಯಾಸಕ್ತರು ಈ ಪುಸ್ತಕ ಜಾತ್ರೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
ಶೇ.50 ರಿಯಾಯತಿ : ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡ ಪುಸ್ತಕಗಳು ಬದಿಯಡ್ಕದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಮೂಲಕ ಶೇಖಡಾ 50ರ ವಿಶೇಷ ರಿಯಾಯತಿ ದರದಲ್ಲಿ ಸಮ್ಮೇಳನದಲ್ಲಿ ಮಾರಾಟಕ್ಕೆ ಲಭ್ಯವಿದೆ. ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಲ್ಲಿ ಇರುವ ಇತರ ಪ್ರಕಾಶನದ ಪುಸ್ತಕಗಳು ಶೇಖಡಾ 15ರಷ್ಟು ರಿಯಾಯತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಮಳಿಗೆಯ ಮುಖ್ಯಸ್ಥ ಕೇಳುಮಾಸ್ತರ್ ಅಗಲ್ಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.