ಬದಿಯಡ್ಕ: ಶಬರಿಮಲೆ ಆಚಾರ ಉಲ್ಲಂಘನೆಗೆ ಬೆಂಬಲವಾಗಿ ನಿಂತ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರಕಾರದ ನಿಲುವನ್ನು ಖಂಡಿಸಿ ಗುರುವಾರ ಅಯ್ಯಪ್ಪ ಕರ್ಮಸಮಿತಿ ಕರೆನೀಡಿ ಕೇರಳ ರಾಜ್ಯಾದ್ಯಂತ ನಡೆದ ಹರತಾಳ ಯಶಸ್ವಿಯಾಗಿದೆ.
ವಿವಿಧೆಡೆ ಸಂಘರ್ಷ ಉಂಟಾಗಿದ್ದು ಜನತೆಯಲ್ಲಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಕಾಸರಗೋಡಿನಿಂದ ತಿರುವನಂತಪುರಂ ತನಕ ನಡೆದ ಅಯ್ಯಪ್ಪ ಜ್ಯೋತಿಯ ಪ್ರಭೆ ಬುಧವಾರದ ಘಟನೆಯಿಂದ ಭಕ್ತರಲ್ಲಿ ರೋಶಾಗ್ನಿಯಾಗಿ ಹೊರಹೊಮ್ಮಿದೆ. ವ್ಯಾಪಾರಿ ಸಂಘಟನೆಗಳು ಹರತಾಳವನ್ನು ಬೆಂಬಲಿಸುವುದಿಲ್ಲವೆಂದು ಕರೆನೀಡಿದ್ದರೂ ಬದಿಯಡ್ಕದಲ್ಲಿ ಯಾವುದೇ ವ್ಯಾಪಾರ ಸಂಸ್ಥೆಯೂ ತೆರೆದಿರಲಿಲ್ಲ. ಹೆಚ್ಚಿನ ವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ವಾಹನ ಸವಾರರು ಪೂರ್ಣ ಬೆಂಬಲವನ್ನು ನೀಡಿರುವುದರಿಂದ ಹರತಾಳ ಪೂರ್ಣವಾಗಿದೆ. ಬೆಳಿಗ್ಗೆ ಅಯ್ಯಪ್ಪ ಕರ್ಮಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ನಂತರ ಪ್ರಧಾನ ರಸ್ತೆಯಲ್ಲಿ ಉರಿಬಿಸಿಲನ್ನೂ ಲೆಕ್ಕಿಸದೆ ಕುಳಿತು ಅಯ್ಯಪ್ಪ ನಾಮಜಪ ಆರಂಭಿಸಿದರು. 300ಕ್ಕೂ ಹೆಚ್ಚು ಭಕ್ತಾದಿಗಳ ನಾಮಜಪ ಪ್ರತಿಭಟನೆಯನ್ನು ಪೊಲೀಸರು ಮೂಕವಿಸ್ಮಿತರಾಗಿ ನೋಡುತ್ತಿದ್ದರು.
ಮಧ್ಯಾಹ್ನ ತನಕ ಮುಂದುವರಿದ ರಸ್ತೆತಡೆಯನ್ನು ಚದುರಿಸಲು ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು. ಕಾರ್ಯಕರ್ತರಾದ ಹರೀಶ್ ನಾರಂಪಾಡಿ, ಅವಿನಾಶ್ ರೈ, ವಿಶ್ವನಾಥ ಪ್ರಭು, ಭಾಸ್ಕರ ಬದಿಯಡ್ಕ, ಮಹೇಶ್ ವಳಕ್ಕುಂಜ, ಮಂಜುನಾಥ ಮಾನ್ಯ ಸಹಿತ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬದಿಯಡ್ಕ ಕುಂಬಳೆ ರಸ್ತೆಯ ನೀರ್ಚಾಲು, ಬೇಳ ಮೊದಲಾದೆಡೆಗಳಲ್ಲಿ ರಸ್ತೆಗಡ್ಡವಾಗಿ ಮರ ಕಲ್ಲುಗಳನ್ನು ಇಟ್ಟು ರಸ್ತೆತಡೆ ನಡೆಸಲಾಗಿತ್ತು. ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದರೂ, ಪ್ರತಿಭಟನಾಕಾರರು ಪುನಃ ರಸ್ತೆ ತಡೆ ನಡೆಸುತ್ತಿರುವುದು ಕಂಡುಬಂದಿತ್ತು. ಬದಿಯಡ್ಕ ಪುತ್ತೂರು ರಸ್ತೆಯ ಉಕ್ಕಿನಡ್ಕ ಹಾಗೂ ಇತರೆಡೆಗಳಲ್ಲೂ ರಸ್ತೆತಡೆ ನಡೆಸಲಾಗಿತ್ತು. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ಮಾರ್ಪನಡ್ಕ, ನಾರಂಪಾಡಿಯಲ್ಲೂ ವ್ಯಾಪಾರ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಹರತಾಳಕ್ಕೆ ಬಿಜೆಪಿ ಪೂರ್ಣ ಬೆಂಬಲವನ್ನು ನೀಡಿತ್ತು. ಬಸ್ ಸಂಚಾರ ಸಂಪೂರ್ಣ ಮೊಟಕುಗೊಂಡಿತ್ತು. ಕೇವಲ ಬೆರಳೆಣಿಕೆಯ ಖಾಸಗಿ ವಾಹನಗಳನ್ನು ಮಾತ್ರ ಕಾಣಸಿಗುತ್ತಿತ್ತು. ಆಸ್ಪತ್ರೆಗಳು, ಮೆಡಿಕಲ್, ಹಾಲು, ಪತ್ರಿಕಾ ಅಂಗಡಿಗಳು ಎಂದಿನಂತೆ ತೆರೆದಿದ್ದವು.
ಮಾವಿನಕಟ್ಟೆಯಲ್ಲಿ ರಸ್ತೆತಡೆ ನಡೆಸಿದ ಭಕ್ತಾದಿಗಳನ್ನು ಪೊಲೀಸರು ಚದುರಿಸಿದರು.